-ಡಾ.ಬಿ.ಪಿ.ಮಹೇಶ ಚಂದ್ರ ಗುರು
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳನ್ನು ಬೌದ್ಧ ಭಿಕ್ಕುಗಳು, ಸೂಫಿಸಂತರು, ದಾಸ ಶ್ರೇಷ್ಟರು, ಸಮಾಜ ಸುಧಾರಕರು, ಮುತ್ಸದ್ದಿಯಾದಿಗಳಾಗಿ ಎಲ್ಲರೂ ರಕ್ಷಿಸುವ ಕಾಯಕದಲ್ಲಿ ಪ್ರಜ್ಞಾಪೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಾರತವು ಧರ್ಮ ನಿರಪೇಕ್ಷತೆಯನ್ನು ಪ್ರಜ್ಞಾಪೂರ್ವಕವಾಗಿ ಪ್ರಮುಖ ಸಾಂವಿಧಾನಿಕ ಮೌಲ್ಯ ಹಾಗೂ ಜೀವನ ವಿಧಾನವನ್ನಾಗಿ ಒಳಗೊಂಡಿದೆ. ಧಾರ್ಮಿಕ ಮೂಲಭೂತವಾದ ಭಾರತದ ಮಣ್ಣಿಗೆ ಒಗ್ಗುವುದಿಲ್ಲವೆಂಬ ಚಾರಿತ್ರಿಕ ಸತ್ಯವನ್ನು ಅನೇಕ ದಾರ್ಶನಿಕರು ಪ್ರಜೆಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಧರ್ಮ ನಿರಪೇಕ್ಷತೆಯೆಂದರೆ ಯಾವುದೇ ಧರ್ಮವಿರೋಧಿಯಲ್ಲ. ಭಾರತವು ಹಿಂದುತ್ವ ರಾಷ್ಟ್ರವಾಗಿರದೇ ಬಹುತ್ವ ಮತ್ತು ಧರ್ಮನಿರಪೇಕ್ಷತೆಗಳನ್ನು ಸ್ವಾತಂತ್ರ್ಯಾ ನಂತರದಲ್ಲಿ ಅಳವಡಿಸಿಕೊಂಡಿದೆ. ದೇಶದ ಏಕತೆ, ಸಮಗ್ರತೆ ಮತ್ತು ಪ್ರಗತಿಗಳಿಗೆ ಅಡ್ಡಿಯುಂಟು ಮಾಡುವ ಧಾರ್ಮಿಕ ನಂಬಿಕೆಗಳು ಮತ್ತು ಆಚಾರಗಳನ್ನು ಭಾರತೀಯ ಸಂವಿಧಾನ ನಿಷೇಧಿಸಿದೆ.
ಮೌರ್ಯರ ಕಾಲದಲ್ಲಿ ಬೌದ್ಧ ಭಾರತವು ವಿಶ್ವದಲ್ಲಿಯೇ ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಾಮಾಜಿಕ ನ್ಯಾಯ, ಆರ್ಥಿಕ ಪ್ರಜಾಸತ್ತೆ ಮೊದಲಾದವುಗಳನ್ನು ಸಾಧಿಸಿ ಜಗತ್ತಿನ ದೊಡ್ಡಣ್ಣನಾಗಿ ಮನ್ನಣೆ ಗಳಿಸಿತು. ಮಧ್ಯಯುಗದಲ್ಲಿ ಮೊಘಲರು ಸಂಪತ್ತಿನ ಆಸೆಗೆ ಹಿಂದೂ ದೇವಾಲಯಗಳನ್ನು ಲೂಟಿ ಮಾಡಿದರೂ ಸಹ ಹಿಂದೂ ಧಾರ್ಮಿಕ ವ್ಯವಸ್ಥೆ ಮತ್ತು ಬಹುತ್ವಗಳನ್ನು ನಾಶಮಾಡುವ ಕೆಲಸಕ್ಕೆ ಕೈಹಾಕಲಿಲ್ಲ. ಅವರು ಮನಸ್ಸು ಮಾಡಿದ್ದರೆ ಪ್ರಭುತ್ವದ ಬಲದಿಂದ ಇಡೀ ಭಾರತವನ್ನೇ ಇಸ್ಲಾಮೀಕರಣಗೊಳಿಸಬಹುದಿತ್ತು. ತದನಂತರ ಭಾರತವನ್ನಾಳಿದ ಡಚ್ಚರು, ಪೋರ್ಚುಗೀಸರು, ಫ್ರೆಂಚರು ಮತ್ತು ಬ್ರಿಟಿಷರು ವಸಾಹತುಶಾಹಿಯನ್ನು ಬಲಪಡಿಸಿದರೇ ಹೊರತು ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ಸಾಮರಸ್ಯಗಳಿಗೆ ಭಂಗವುಂಟು ಮಾಡಲಿಲ್ಲ.
‘ಸ್ವರಾಜ್ಯ ನನ್ನ ಜನ್ಮ ಸಿದ್ಧಹಕ್ಕು, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಸಿಂಹಘರ್ಜನೆಯಿಂದ ದೇಶಾದ್ಯಂತ ಜನಮನ್ನಣೆ ಗಳಿಸಿದ್ದ ತಿಲಕರು ಉಗ್ರ ಹಿಂದುತ್ವವಾದಿಯಾಗಿದ್ದರು. ಅವರಿಗೆ ಭಾರತವು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳಬೇಕೆಂಬ ಮಹೋನ್ನತ ಆಶಯವಿದ್ದರೂ ಸಹ ಧರ್ಮನಿರಪೇಕ್ಷತೆಯನ್ನು ಸುಸ್ಥಿರಗೊಳಿಸುವಲ್ಲಿ ಕನಿಷ್ಠ ಬದ್ಧತೆಯೂ ಇರಲಿಲ್ಲ. ಹಿಂದುತ್ವವಾದದ ಪ್ರಧಾನ ಪ್ರವರ್ತಕರಾದ ಹೆಡಗೆವಾರ್, ಸಾವರ್ಕರ್, ಗೋಲ್ವಾಲ್ಕರ್ ಮೊದಲಾದ ಯಹೂದಿ ಮೂಲದ ಚಿತ್ಪಾವನ ಬ್ರಾಹ್ಮಣ ನಾಯಕರು ಬಹುತ್ವದ ಮತ್ತು ಧರ್ಮನಿರಪೇಕ್ಷತೆ ಆಶಯಗಳನ್ನು ಅನುಷ್ಠಾನಗೊಳಿಸಲು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.
ರಾಷ್ಟ್ರಪಿತನೆಂದು ಸಾರ್ವಕಾಲಿಕ ಮನ್ನಣೆ ಗಳಿಸಿರುವ ಅಹಿಂಸೆಯ ಪ್ರತಿರೂಪ ಮಹಾತ್ಮ ಗಾಂಧಿ ಮುನ್ನಡೆಸಿದ ಸ್ವಾತಂತ್ರ್ಯ ಸಂಗ್ರಾಮ ಸ್ವತಂತ್ರ ಭಾರತದ ಅಸ್ತಿತ್ವಕ್ಕೆ ಮಹತ್ವದ ಕೊಡುಗೆ ನೀಡಿದೆ. ವರ್ಣಾಶ್ರಮ ಪದ್ದತಿಯನ್ನು ನೇರವಾಗಿ ಸಮರ್ಥಿಸಿದ ಗಾಂಧಿ ಮದು ಹಿಂದುತ್ವವಾದಿಯಾಗಿದ್ದರೇ ಹೊರತು ಧರ್ಮ ನಿರಪೇಕ್ಷತೆಗೆ ಮಹತ್ವದ ಕೊಡುಗೆ ನೀಡಲಿಲ್ಲ. ಆದರೂ ಸಹ ಗೋಡ್ಸೆ ಗಾಂಧಿಯನ್ನು ಅಮಾನುಷವಾಗಿ ಕೊಂದದ್ದು ಭಾರತದ ಚರಿತ್ರೆಯಲ್ಲಿ ಕರಾಳ ಅಧ್ಯಾಯವಾಗಿದೆ.
ಗಾಂಧಿಯ ಸಮಕಾಲೀನರು ಹಾಗೂ ಕಟ್ಟಕಡೆಯ ಮನುಷ್ಯನನ್ನು ಅಪ್ಪಿಕೊಂಡು ಜಾಗತಿಕವಾಗಿ ಮಹಾಜ್ಞಾನಿ – ಮಹಾನಾಯಕನೆಂದು ವಿಶ್ವಸಂಸ್ಥೆಯಿಂದಲೇ ಮನ್ನಣೆ ಪಡೆದ ಅಂಬೇಡ್ಕರ್ ಬುದ್ಧರ ಮಹಾ ಅನುಯಾಯಿಯಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪೂರಕವಾದ ಸಂವಿಧಾನವನ್ನು ರಚಿಸಿದರು. ಸಂವಿಧಾನದ ಪೀಠಿಕೆ, ರಾಜ್ಯನಿರ್ದೇಶಕ ತತ್ವಗಳು, ಮೂಲಭೂತ ಹಕ್ಕುಗಳು ಮೊದಲಾದವುಗಳು ಸರ್ವರಿಗೂ ಸಮಬಾಳು – ಸರ್ವರಿಗೂ ಸಮಪಾಲು ನೀಡಿ ಬಹುತ್ವ, ಧರ್ಮನಿರಪೇಕ್ಷತೆ, ಬಹುಜನರ ಕಲ್ಯಾಣ ಮೊದಲಾದವುಗಳಿಗೆ ಪೂರಕವಾಗಿವೆ.
ಸಾಂವಿಧಾನಿಕ ಧರ್ಮನಿರಪೇಕ್ಷತೆ ಹಿಂದುತ್ವ ಕೇಂದ್ರಿತ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಜಾಸತ್ತೆಗಳನ್ನು ಅನುಮೋದಿಸುವುದಿಲ್ಲ. ಎಲ್ಲ ಧರ್ಮಗಳೂ ಸಂವಿಧಾನದ ದೃಷ್ಟಿಯಲ್ಲಿ ಸಮಾನ. ಬಹುತ್ವ ಕೇಂದ್ರಿತ ಸಮಾಜೋ-ರಾಜಕೀಯ ವ್ಯವಸ್ಥೆ ಬಲಗೊಳ್ಳುವುದರಿಂದ ವರ್ಗ ಪ್ರಭುತ್ವ ಮತ್ತು ಜಾತಿಪ್ರಭುತ್ವಗಳಿಂದ ಭಾರತದ ಬಹುಜನರನ್ನು ಅಸಮಾನತೆಯಿಂದ ಸಮಾನತೆಯೆಡೆಗೆ ಮುನ್ನಡೆಸಬಹುದೆಂಬ ಅಂಬೇಡ್ಕರ್, ಪೆರಿಯಾರ್, ಲೋಹಿಯಾ, ನಾರಾಯಣ ಗುರು ಮೊದಲಾದವರು ಪ್ರತಿಪಾದಿಸಿದರು. ಭಾರತವು ಬಹುಧರ್ಮಗಳು, ಸಂಪ್ರದಾಯಗಳು, ಭಾಷೆಗಳು ಮತ್ತಿತರ ವೈವಿಧ್ಯತೆಗಳ ನಡುವೆಯೂ ಏಕತೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಪ್ರಧಾನಿ ನೆಹರು ಭಾರತದ ಬಹುಸಂಸ್ಕೃತಿ ದೇಶದ ಅಪೂರ್ವ ಶಕ್ತಿಯೆಂದೇ ಬಣ್ಣಿಸಿದ್ದರು.
1980ರ ದಶಕದಿಂದಲೂ ಆರೆಸ್ಸೆಸ್, ವಿಶ್ವಹಿಂದೂ ಪರಿಷತ್, ಭಜರಂಗದಳ, ಶ್ರೀರಾಮಸೇನೆ ಮೊದಲಾದ ಹಿಂದುತ್ವವಾದಿ ಸಂಘಟನೆಗಳು ಹಿಂದೂ ಸಾಮ್ರಾಜ್ಯಶಾಹಿಯನ್ನು ದೇಶದಲ್ಲಿ ಬೆಳೆಸುವ ಸಲುವಾಗಿ ಧರ್ಮನಿರಪೇಕ್ಷತೆಯನ್ನು ದುರ್ಬಲಗೊಳಿಸುವ ಕಾಯಕದಲ್ಲಿ ನಿರತವಾಗಿವೆ. 1990ರ ದಶಕದಲ್ಲಿ ವೈದಿಕಶಾಹಿ ಮತ್ತು ಬಂಡವಾಳಶಾಹಿಗಳ ಅನೈತಿಕ ಮೈತ್ರಿಯಿಂದಾಗಿ ಭಾರತದಲ್ಲಿ ಕೋಮು ಧ್ರುವೀಕರಣ ಉಂಟಾಯಿತು. ಇಂತಹ ಪ್ರವತ್ತಿಯಿಂದಾಗಿ ಧರ್ಮವನ್ನು ರಾಜಕಾರಣದಿಂದ ಬೇರ್ಪಡಿಸುವುದು ಭಾರತದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವಾಗಿಲ್ಲ.
ಕಳೆದ 25 ವರ್ಷಗಳ ಹಿಂದೆ ಅಡ್ವಾಣಿ ನೇತೃತ್ವದಲ್ಲಿ ಜರುಗಿದ ರಥಯಾತ್ರೆ ಇಂದಿನ ಹಿಂದುತ್ವವಾದಿಗಳ ವಿಜಯದಶಮಿಗೆ ಮುನ್ನುಡಿ ಬರೆದಿತ್ತು. ತದನಂತರದ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳು ಹಿಂದುತ್ವವಾದಿಗಳು ಬಿಜೆಪಿ ಮತ್ತು ಸಂಘಪರಿವಾರಿಗಳ ನೇತತ್ವದಲ್ಲಿ 2014ರಲ್ಲಿ ದೇಶದ ಅಧಿಕಾರ ಗದ್ದುಗೆ ಹಿಡಿಯಲು ಸಹಕರಿಸಿದವು. ಹಿಂದುತ್ವವೆಂದರೆ ಪ್ರಾಯೋಗಿಕವಾಗಿ ಬ್ರಾಹ್ಮಣತ್ವದ ರಕ್ಷಣೆಯೇ ಆಗಿದೆ. ಭಾರತದಲ್ಲಿ 2014ರಿಂದಲೂ ಪ್ರಸ್ತುತ ಹಿಂದುತ್ವ ಕೇಂದ್ರಿತ ಪ್ರಭುತ್ವ ಪ್ರಾಯೋಜಿತ ಕೋಮು ಧ್ರುವೀಕರಣದಿಂದಾಗಿ ಪ್ರಜಾಸತ್ತೆ, ಸಂವಿಧಾನ, ಬಹುತ್ವ ಮತ್ತು ಧರ್ಮ ನಿರಪೇಕ್ಷತೆಗಳೆಂಬ ಜೀವಪರ ಮೌಲ್ಯಗಳು ಕುಸಿಯತೊಡಗಿವೆ. ಇಂದು ಭಾರತದ ಬಹುಜನರು ಸಂವಿಧಾನ ಉಳಿಸಿ ಮತ್ತು ಪ್ರಜಾಪ್ರಭುತ್ವ ರಕ್ಷಿಸಿಯೆಂದು ದೇಶಾದ್ಯಂತ ಆಗ್ರಹಿಸುತ್ತಿದ್ದಾರೆ.
ಭಾರತದ ಇಂದಿನ ದುರವಸ್ಥೆಗೆ ಹಿಂದುತ್ವವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳು ಎಷ್ಟು ಕಾರಣರೋ ಜಾತ್ಯತೀತರು ಮತ್ತು ಸಮಾಜವಾದಿಗಳ ಸೋಗಿನಲ್ಲಿರುವ ಅವಕಾಶವಾದಿಗಳೂ ಅಷ್ಟೇ ಕಾರಣರಾಗಿದ್ದಾರೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನೇತೃತ್ವದಲ್ಲಿ ಜರುಗಿದ ಭೂಮಿ ಪೂಜೆ ಭಾರತದ ಧರ್ಮನಿರಪೇಕ್ಷತೆಯನ್ನು ಮಣ್ಣುಪಾಲು ಮಾಡಿದೆ. ಅಯೋಧ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಗೆದಷ್ಟು ಬಗೆದಷ್ಟು ಬೌದ್ಧ ಸ್ಮಾರಕಗಳೇ ಲಭಿಸುತ್ತಿರುವ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಎಷ್ಟು ಸರಿಯೆಂಬ ಪ್ರಶ್ನೆ ಪ್ರಜ್ಞಾವಂತ ಭಾರತೀಯರನ್ನು ಕಾಡುತ್ತಿದೆ. ಸರ್ವೋಚ್ಛ ನ್ಯಾಯಾಲಯಕ್ಕೆ ರಾಮಮಂದಿರ ನಿರ್ಮಾಣ ವಿಷಯದಲ್ಲಿ ತೀರ್ಪು ನೀಡುವ ಪರಮಾಧಿಕಾರವನ್ನು ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಮತ್ತು ವಿಷಯ ಪರಿಣತರು ವ್ಯಾಪಕವಾಗಿ ಪ್ರಶ್ನಿಸಿದ್ದಾರೆ. ಧರ್ಮನಿರಪೇಕ್ಷತೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಇತ್ತೀಚೆಗೆ ಅಂತಾರಾಷ್ಟ್ರೀಯ ಆಯಾಮ ಪಡೆದುಕೊಂಡಿದೆ. ರಾಜಕೀಯ ಅಧಿಕಾರವನ್ನು ಬಳಸಿಕೊಂಡು ರಾಮಮಂದಿರ ನಿರ್ಮಾಣಕ್ಕೆ ಕಾನೂನಿನ ಚೌಕಟ್ಟನ್ನು ಮೀರಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುತ್ತಿರುವ ಬಗ್ಗೆ ಇಂದು ಪ್ರಶ್ನಾರ್ಹವಾಗಿದೆ.
ಇಡೀ ವಿಶ್ವ ಫೆಬ್ರವರಿ 20ರಂದು ‘ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ’ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರದ ವ್ಯಾಪ್ತಿಗೊಳಪಡುವ ಸಾರ್ವಜನಿಕ ಶಿಕ್ಷಣ ಇಲಾಖೆ ‘ಹೊಸ ಧರ್ಮಗಳ ಉದಯ’ ಎಂಬ ಅಧ್ಯಾಯದಲ್ಲಿ 2500 ವರ್ಷಗಳ ಹಿಂದೆ ವೈದಿಕ ಚಿಂತನೆಗೆ ಭಿನ್ನವಾದ ಬೌದ್ಧ ಧರ್ಮ ಮತ್ತು ಜೈನಧರ್ಮಗಳ ಐತಿಹಾಸಿಕ ಮಹತ್ವವನ್ನು ಸಮಾಜ ವಿಜ್ಞಾನ ವಿದ್ಯಾರ್ಥಿಗಳು ಕಲಿಯದಂತೆ ಪಠ್ಯಕ್ಕೆ ಹಾಕಿರುವ ಕತ್ತರಿ ‘ಬಹುತ್ವಕ್ಕೆ ಹಾಕಿರುವ ಕತ್ತರಿ’ ಆಗಿದೆ. ಸಾರ್ವತ್ರಿಕ ಶಿಕ್ಷಣ ಇಲಾಖೆಯನ್ನು ಮುನ್ನಡೆಸುತ್ತಿರುವ ಹುಟ್ಟು ಮನುವಾದಿ ಸುರೇಶ್ ಕುಮಾರ್ ಕೈಗೊಂಡಿರುವ ಈ ಕ್ರಮ ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಇವರಿಗೆ ಭಾರತ ದೇಶಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಿಗೆ ಅಪಚಾರ ಬಗೆದು ಹಿಂದುತ್ವವನ್ನು ವೈಭವೀಕರಿಸುವ ಮತ್ತು ಬಹುಸಂಖ್ಯಾತ ಶೂದ್ರರನ್ನು ನಿರಂತರ ಗುಲಾಮಗಿರಿಗೆ ದಬ್ಬುವ ಗುಪ್ತ ಕಾರ್ಯಸೂಚಿ ಇರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿ ಗೋಚರವಾಗಿದೆ.
ಗೌತಮ ಬುದ್ಧ ಮತ್ತು ಮಹಾವೀರ ಇಬ್ಬರು ಹೊಸ ಚಿಂತನಾಕ್ರಮದ ಹರಿಕಾರರು ಮತ್ತು ಭರತ ಖಂಡದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಸತ್ತೆಗೆ ಮುನ್ನುಡಿ ಬರೆದ ಮಹಾಪುರುಷರೆಂಬ ಕನಿಷ್ಠ ಪ್ರಜ್ಞೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಾಥಮಿಕ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಗೆ ಇಲ್ಲದಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ಇತಿಹಾಸ ಪುನಾರಚನೆಗೆ ಚಾರಿತ್ರಿಕ ದಾಖಲೆ ಮತ್ತು ಸಮರ್ಥನೆಗಳು ಅತ್ಯವಶ್ಯಕವೆಂಬ ಕನಿಷ್ಠ ಪ್ರಜ್ಞೆಯು ಕರ್ನಾಟಕ ಸರಕಾರಕ್ಕೆ ಇಲ್ಲವಾಗಿದೆ. ಅಹಿಂಸೆಯೇ ಪರಮ ಧರ್ಮವೆಂದು ಬೋಧಿಸಿದ ಮಹಾವೀರ ಮತ್ತು ಸಮಾನತೆಯೇ ಶ್ರೇಷ್ಠ ಜೀವನ ಮಾರ್ಗವೆಂದು ಪ್ರತಿಪಾದಿಸಿದ ಬುದ್ಧರು ವಿನಾಶದೆಡೆಗೆ ಸಾಗುತ್ತಿರುವ ವಿಶ್ವವನ್ನು ಪಾರು ಮಾಡುವ ಮತ್ತು ಉದ್ಧರಿಸುವ ಮಹಾಶಕ್ತಿಗಳೆಂಬ ಅರಿವು ನಮ್ಮನ್ನು ಆಳುವವರಿಗೆ ಬೇಕು. ವಿನಾಶಕಾಲದಲ್ಲಿ ವಿಪರೀತ ಬುದ್ಧಿ ಎಂಬಂತೆ ಇಂದು ನಮ್ಮನ್ನು ಆಳುತ್ತಿರುವವರು ರಾಜಕೀಯ ಬಲ, ಹಣಬಲ ಮತ್ತು ತೋಳ್ಬಲಗಳಿಂದ ಅವಿವೇಕದಿಂದ ವರ್ತಿಸುತ್ತಿದ್ದಾರೆ. ಇನ್ನಾದರೂ ಭಾರತೀಯ ಸಂವಿಧಾನದ ಬಹುದೊಡ್ಡ ಸಿದ್ಧಾಂತವಾದ ‘ಒಳಗೊಳ್ಳುವ ಸಂಸ್ಕೃತಿ ಮತ್ತು ಅಭಿವದ್ಧಿ’ಯೆಡೆಗೆ ದೇಶವನ್ನು ಮುನ್ನಡೆಸುವ ದೃಷ್ಟಿಯಿಂದ ಈ ಆದೇಶವನ್ನು ಕರ್ನಾಟಕ ರಾಜ್ಯ ಸರಕಾರ ತಕ್ಷಣ ಹಿಂಪಡೆಯಬೇಕು.