ಕರ್ನಾಟಕದ ಕೆಲವು ಪ್ರದೇಶ ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲು ಸರ್ಕಾರ ಬದ್ಧ: ಉದ್ಧವ್ ಠಾಕ್ರೆ

Prasthutha|

ಕರ್ನಾಟಕದಲ್ಲಿ ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.
ಈ ವಿಷಯದಲ್ಲಿ ಹುತಾತ್ಮರಾದವರಿಗೆ ನಾವು ಸಲ್ಲಿಸುವ “ನಿಜವಾದ ಗೌರವ” ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಟ್ವೀಟ್‌ನಲ್ಲಿ ತಿಳಿಸಿದೆ.
ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಪ್ರಸ್ತುತ ಭಾಷಾವಾರು ಆಧಾರದ ಮೇಲೆ ಕರ್ನಾಟಕಕ್ಕೆ ಸೇರಿರುವ ಬೆಳಗಾವಿ ಮತ್ತು ಇತರ ಕೆಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಆ ರಾಜ್ಯ ಬೇಡಿಕೆ ಇಟ್ಟಿದೆ.
ಬೆಳಗಾವಿ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಕೆಲವು ಪ್ರದೇಶಗಳ ವಿಲೀನಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದವರಿಗಾಗಿ ಜನವರಿ 17ರನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ‘ಹುತಾತ್ಮರ ದಿನ’ ವಾಗಿ ಆಚರಿಸಿಕೊಂಡು ಬರುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಮಾತನಾಡುವ ಮತ್ತು ಸಂಸ್ಕೃತಿ ಹೊಂದಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಗಡಿ ವಿಷಯಕ್ಕಾಗಿ ಹೋರಾಟ ನಡೆಸಿ ಹುತಾತ್ಮರಾದವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಇದಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್‌ ಮಾಡಿದೆ.
ಕರ್ನಾಟಕದ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕೆಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಈ ಪ್ರದೇಶಗಳಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಮಹಾರಾಷ್ಟ್ರ ಹಿಂದಿನಿಂದಲೂ ವಾದಿಸುತ್ತಾ ಬಂದಿದೆ.



Join Whatsapp