ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.
ಮಂಗಳೂರು ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಸಂಗೀತ, ನೃತ್ಯ ಸಹಿತ ಮನೋರಂಜನ ಚಟುವಟಿಕೆಗಳು, ಸಂಭ್ರಮ ಕೂಟಗಳು ಮಂಗಳವಾರ ಸಂಜೆಯಿಂದಲೇ ಆರಂಭಗೊಂಡು ತಡರಾತ್ರಿ ವರೆಗೂ ಮುಂದುವರಿಯಿತು.
ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಉಳ್ಳಾಲ ಬೀಚ್‌ಗಳಲ್ಲಿ ಪ್ರವಾಸಿಗರ ದಂಡು ಕಂಡು ಬಂತು. ಹೊಟೇಲ್, ರೆಸಾರ್ಟ್, ಹೋಂ ಸ್ಟೇಗಳು ಬಹುತೇಕ ಭರ್ತಿಯಾಗಿದ್ದವು. ಮಲ್ಪೆ, ಕಾಪು ಇತರ ಬೀಚ್‌ಗಳಲ್ಲಿ ಜನರು ಸಂಭ್ರಮಾಚರಣೆ ನಡೆಸಿದರು. ಹೊರ ಜಿಲ್ಲೆ/ರಾಜ್ಯದ ಪ್ರವಾಸಿಗರು ಭಾಗವಹಿಸಿದ್ದರು. ಕೆಲವೆಡೆ ರಾತ್ರಿ 12 ಗಂಟೆಯಾಗುತ್ತಿದ್ದಂತೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ನೂತನ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಲಾಯಿತು.
ಬೆಂಗಳೂರಿನ ಪ್ರಮುಖ ರಸ್ತೆ ಎಂ.ಜಿ ರೋಡ್ ಬ್ರಿಗೇಡ್ ರೋಡ್ ನಲ್ಲಿ ಯುವ ಸಮೂಹ ಬೀಡುಬಿಟ್ಟಿದ್ದು 12 ಗಂಟೆಯಾಗುತ್ತಿದ್ದಂತೆ ಕುಣಿದು ಕುಪ್ಪಳಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು. ಮತ್ತೊಂದೆಡೆ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಚರ್ಚ್ಸ್ಟ್ರೀಟ್ನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಹೆಚ್ಚು ಜನ ಸೇರುವ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದೇವೆ. ಸಿಸಿ ಕ್ಯಾಮರಾ ಮೂಲಕ ನಿಗಾ ವಹಿಸುತ್ತಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿದೆ. ಸಂಭ್ರಮಾಚರಣೆಯ ಖುಷಿಯಲ್ಲಿ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸುವುದು ಕೂಡ ಅಗತ್ಯ ಎಂದು ಹೇಳಿದರು.