-ಕಲೀಮ್
ಮುಹಮ್ಮದ್ ಬುಆಸಿಸ್ ರಿಗೆ 2010 ಡಿಸೆಂಬರ್ 17ನೇ ದಿನಾಂಕವು ಒಂದು ಸಾಮಾನ್ಯ ದಿವಸವಾಗಿತ್ತು. ಬಾಲ್ಯದಲ್ಲಿ ತಂದೆಯ ನಿಧನದ ನಂತರ ಖುದ್ದು ಮುಹಮ್ಮದ್ ತನ್ನ ತಾಯಿಯನ್ನು ಮತ್ತು 6 ಸಹೋದರರನ್ನು ಸಾಕಿ ಬೆಳೆಸಿದ್ದನು. ಸದಾ ಹಾಸ್ಯ ಚಟಾಕಿ ಹಾರಿಸುವ ಮುಹಮ್ಮದ್ ನನ್ನು ಬಸ್ ಬುಸ್ ಎಂದು ಗೆಳೆಯರು ಕರೆಯುತ್ತಿದ್ದರು. ಡಿಸೆಂಬರ್ 17ರಂದು ತುನೀಶಿಯಾದ ರಾಜಧಾನಿ ಲೈಸನ್ಸ್ ಇಲ್ಲದೆ ಹಣ್ಣು ಹಂಪಲು ಮಾರಾಟ ಮಾಡಿದ ಆರೋಪವನ್ನು ಹೊರಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಆ ಯುವಕನಿಗೆ ಸಂಬಂಧಿಸಿದಂತೆ ಪೊಲೀಸರ ಈ ಕ್ರಮವು ತನ್ನ ಘನತೆಯ ಮೇಲೆ ಮಾಡಿದ ನೇರ ದಾಳಿಯಾಗಿತ್ತು. ಆತನ ತಕ್ಕಡಿಯನ್ನು ಪೊಲೀಸರು ಕೊಂಡೊಯ್ದಿದ್ದರು. ಗವರ್ನರ್ ಕಛೇರಿಯಲ್ಲಿ ದೂರು ಕೊಟ್ಟಾಗ ಅದನ್ನು ಯಾರೂ ಗಮನಿಸಲಿಲ್ಲ. ಆ ಕಾಲದಲ್ಲಿ ತುನೀಶಿಯಾ ದೇಶವನ್ನು ಆಳಿದ ಝೈನುಲ್ ಆಬಿದೀನ್ ಭ್ರಷ್ಟಾಚಾರ ಮತ್ತು ಅಹಂಕಾರಕ್ಕೆ ಕುಖ್ಯಾತಿ ಪಡೆದಿದ್ದ. ಎರಡು ವಾರ ದವಾಖಾನೆಯಲ್ಲಿ ಮಲಗಿದ ಮುಹಮ್ಮದ್ ಜನವರಿ 4ರಂದು ಮೃತನಾಗುತ್ತಾನೆ. ಮುಹಮ್ಮದನ ಆತ್ಮಾಹುತಿ ಅರಬ್ ಜಗತ್ತು ಅದುಮಿಟ್ಟುಕೊಂಡ ಅಕ್ರೋಶಕ್ಕೆ ಕಿಡಿ ಹಚ್ಚಿತ್ತು. ಅದು ಇದೀಗ ಬಾಡಿ ಕರಟಿ ಹೋದ ವಸಂತದ ಆರಂಭವಾಗಿತ್ತು.
ಅದಾಗಿ ಹತ್ತು ವರುಷ ಕಳೆಯುವಷ್ಟರಲ್ಲಿ ಅರಬ್ ಜಗತ್ತು ಕೇವಲ ಬರಡು ಚಿತ್ರವನ್ನು ಉಳಿಸಿಕೊಂಡಿದೆ. ಅರಬ್ ಸರ್ವಾಧಿಕಾರಿಗಳು ಒಂದಿನಿತೂ ಸುರಕ್ಷಿತರಲ್ಲದಿದ್ದರೂ ಪ್ರಜೆಗಳು ಅರಕ್ಷಿತರಾಗಿದ್ದಾರೆ. ತೈಲ ಬೆಲೆ ಪಾತಾಳಕ್ಕೆ ಇಳಿದೊಡನೆ ಕೊಲ್ಲಿಯ ದೊರೆಗಳಿಗೆ ‘ಕಿಟ್’ ಕೊಟ್ಟು ಜನರನ್ನು ಸುಮ್ಮನೆ ಇರಿಸುವುದು ಸಾಧ್ಯವಾಗಲಿಲ್ಲ. ಸೌದಿಯ ನಿಜವಾದ ರಾಜನಾದ ಮುಹಮ್ಮದ್ ಬಿನ್ ಸಲ್ಮಾನ್ ತನ್ನವರನ್ನೇ ಪಂಚತಾರಾ ಬಂದೀಖಾನೆಗಳಲ್ಲಿ ಕೂಡಿಟ್ಟಿದ್ದಾರೆ. ಇನ್ನು ತನ್ನನ್ನು ಟೀಕಿಸುವ ಮಂದಿಯನ್ನು ಮುಗಿಸಿಬಿಟ್ಟು ಅಥವಾ ಭಯಪಡಿಸಿ ಬಾಯಿ ಮುಚ್ಚಿಸುತ್ತಿದ್ದಾರೆ. (ಜಮಾಲ್ ಖಶೋಗಿಯನ್ನು ನೆನಪಿಸಿಕೊಳ್ಳಿ)
ಈಜಿಪ್ಟಿನ ಅಲ್ ಸೀಸಿ ಹೊಸ ಬಂದೀಖಾನೆಗಳನ್ನು ನಿರ್ಮಿಸಿ ಆತ್ಮರಕ್ಷಣೆಗಾಗಿ ಮೊಸಾದ್ ನ ತಾಂತ್ರಿಕ ಸಹಾಯವನ್ನು ಖಾತರಿಪಡಿಸಿಕೊಂಡಿದ್ದಾರೆ. ಸಿರಿಯಾದಲ್ಲಿ ಏನು ನಡೆಯುತ್ತಿದೆ ಎಂದು ಡಮಸ್ಕಸ್ ನಲ್ಲಿರುವ ದೇಶದ ಅಧ್ಯಕ್ಷ ಬಶ್ಶಾರ್ ಗೆ ತಿಳಿಯದು. ಯುಎಇ ಮತ್ತು ಬಹರೈನ್ ಇವೆರಡು ದೇಶಗಳು ತಮ್ಮ ಸಿಂಹಾಸನದ ರಕ್ಷಣೆಗಾಗಿ ಇಸ್ರೇಲನ್ನು ಅವಲಂಬಿಸಿದೆ. ಅಲ್ಜೀರಿಯ, ಇರಾಕ್, ಲೆಬನಾನ್ ಮೊದಲಾದ ರಾಷ್ಟ್ರಗಳೆಲ್ಲವೂ ಪಾಶ್ಚಾತ್ಯ ಯಜಮಾನರಿಗೆ ಸೆಲ್ಯೂಟ್ ಹೊಡೆಯುತ್ತಿವೆ.
ಪ್ರಜಾತಂತ್ರ ಸಮಾಜದ ಅಸ್ತಿತ್ವಕ್ಕಾಗಿ ಕಡ್ಡಾಯವಾಗಿಯೂ ಸ್ವಯಂ ಆಡಳಿತ ಸಂಸ್ಥೆಗಳು ಬೇಕೇಬೇಕು. ವಿಶ್ವವಿದ್ಯಾನಿಲಯ, ಮಾಧ್ಯಮ, ಪೌರ ಗುಂಪು, ನ್ಯಾಯಾಲಯ ಮುಂತಾದವುಗಳು ಅವುಗಳಲ್ಲಿ ಸೇರಿಕೊಂಡಿವೆ. ಮುಸ್ಲಿಮ್ ಜಗತ್ತಿನಲ್ಲಿ ಮಸ್ಜಿದ್ ಗಳು ನಿರ್ಣಾಯಕವಾಗಿವೆ. ಸಾಮಾನ್ಯವಾಗಿ ಅರಬ್ ಜಗತ್ತಿನ ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು, ಖತೀಬರು, ಸರಕಾರಿ ಗೆಜೆಟ್ ಗಳನ್ನು ನೋಡಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ. ಸರಕಾರವು ಭಾರಿ ಮೊತ್ತದ ಹಣವನ್ನು ನೀಡಿ ರಚಿಸಿದ ಗುಪ್ತಚರ ಇಲಾಖೆಗಳು ಪ್ರತಿಸ್ಥಳದಲ್ಲೂ ತಮ್ಮ ಬೇರುಗಳನ್ನು ಹರಡಿಬಿಟ್ಟಿದೆ. ಆದ್ದರಿಂದ ತುಂಬಾ ಎಚ್ಚ್ಚರಿಕೆಯಿದ್ದರಷ್ಟೆ ರಾಜಕೀಯ ಟೀಕೆಗಳನ್ನು ಮಾಡಬಹುದು. ಈ ಮಧ್ಯೆ ಇತರ ರಾಷ್ಟ್ರಗಳಿಗೆ ನಿರೀಕ್ಷೆ ನೀಡುವಂತೆ ತುನೀಶಿಯಾ ಸಣ್ಣ ಪ್ರಕಾಶದೊಂದಿಗೆ ಮುಂದುವರಿಯುತ್ತಿದೆ. ಪೊಲೀಸ್ ಇನ್ನಷ್ಟು ಸೂಕ್ಷ್ಮವಾಗಿ ವ್ಯವಹರಿಸುತ್ತಿದೆ. ತುನೀಶಿಯಾದಲ್ಲಿ ಡಿಸೆಂಬರ್ 17ಕ್ಕೆ ರಜೆಯಾಗಿತ್ತು. ರಾಜಕೀಯ ಅಧಿಕಾರ ಕಚ್ಚಾಟದ ಕಾರಣ ಜನಸಾಮಾನ್ಯರು ಬೇಸರಿಸಿಕೊಂಡದ್ದು ಪ್ರಜಾತಂತ್ರಕ್ಕೆ ತಿರುಗುಬಾಣವಾಗಬಹುದು ಎಂಬ ಆತಂಕವನ್ನು ಪೌರ ಹಕ್ಕುಗಳ ಕಾರ್ಯಕರ್ತರು ಹೊಂದಿದ್ದಾರೆ.
ಗಲ್ಲು ಶಿಕ್ಷೆ ಬೇಕೆ?
ಅತ್ಯಂತ ಪ್ರತಿಕೂಲವಾದ ಸಾಮಾಜಿಕ-ರಾಜಕೀಯ ಸನ್ನಿವೇಶಗಳ ಕಾರಣದಿಂದ ಗಲ್ಲು ಶಿಕ್ಷೆಯನ್ನು ಒಂದು ಶಿಕ್ಷಾಕ್ರಮವಾಗಿ ಉಳಿಸಿಕೊಳ್ಳಬೇಕೇ ಎಂಬ ವಿಚಾರದ ಬಗ್ಗೆ ಹಲವು ಮುಸ್ಲಿಮ್ ಚಿಂತಕರು ವಿಭಿನ್ನವಾಗಿ ಅಭಿಪ್ರಾಯಿಸುತ್ತಾರೆ. ಒಟ್ಟಾರೆ ಅದು ಸರಿಯಲ್ಲವೆಂದು ಹೇಳುವವರ ಪ್ರಮಾಣವು ಹೆಚ್ಚುತ್ತಿವೆ. ಸರ್ವಾಧಿಕಾರದ ಕೆಳಗೆ ಉಸಿರುಗಟ್ಟುತ್ತಿರುವ ಕಾರಣ ಇತರ ಮುಸ್ಲಿಮ್ ರಾಷ್ಟ್ರಗಳಲ್ಲೂ ವರ್ತಮಾನದ ದುರಾಡಳಿತದ ವಿರುದ್ಧ ಪ್ರತಿಭಟಿಸುವುದು ಕೂಡ ಮರಣ ದಂಡನೆಯ ಶಿಕ್ಷೆಗೆ ಕಾರಣವಾಗುತ್ತಿದೆ. ಖಲೀಫ ಎಂಬ ಸುಳ್ಳು ಹೆಸರಿನಲ್ಲಿ ಆಡಳಿತ ನಡೆಸುವ ಸುಲ್ತಾನರನ್ನು ಸಂರಕ್ಷಿಸಲು ಕ್ಷೋಭೆಯ ಆರೋಪವನ್ನು ಹೊರಿಸಿ, ಸರಕಾರವನ್ನು ಟೀಕಿಸುವ ಮಂದಿಯನ್ನು ಹತ್ಯೆಗೈಯ್ಯುವುದರಲ್ಲಿ ನ್ಯಾಯವನ್ನು ಕಂಡುಕೊಳ್ಳುತ್ತಿದ್ದಾರೆ. ಸೌದಿಗಳು ಮತ್ತು ಇರಾನಿಗಳು ತಮಗೆ ಅನುಕೂಲವಾದ ರೀತಿಯಲ್ಲಿ ಆ ಪದವನ್ನು ಉಪಯೋಗಿಸುತ್ತಿದ್ದಾರೆ. ಅರಾಜಕತೆಗೆ ಯತ್ನಿಸಿದರು ಎಂದು ಆರೋಪಿಸಿ ಸೌದಿ ಅರೇಬಿಯಾ, ಈಜಿಪ್ಟ್ ಮೊದಲಾದ ರಾಷ್ಟ್ರಗಳು ತಮ್ಮ ರಾಜಕೀಯ ವಿರೋಧಿಗಳನ್ನು ನೇಣಿಗೆರಿಸಲು ತೊಡಗಿದ್ದಾರೆ. ಈ ವಿಚಾರದಲ್ಲಿ ಸಾಮಾನ್ಯವಾಗಿ ಒಂದು ರೀತಿಯ ಪ್ರಜಾಸತ್ತೆ ಉಳಿಸಿಕೊಂಡಿರುವ ಇರಾನ್ ಕೂಡ ಪ್ರಥಮ ಸ್ಥಾನದಲ್ಲಿದೆ. ರೂಹುಲ್ಲಾ ಝಮ್ ಎಂಬ ಭಿನ್ನಮತೀಯನಿಗೆ ಮರಣ ದಂಡನೆ ವಿಧಿಸಿ ನಾಲ್ಕು ದಿವಸದ ಒಳಗಾಗಿ ಗಲ್ಲಿಗೇರಿಸುತ್ತಾರೆ. 2011ರಲ್ಲಿ ಬಂಧನವನ್ನು ಭಯಪಟ್ಟು ಪ್ಯಾರಿಸ್ ನಲ್ಲಿ ಆಶ್ರಯವನ್ನು ಪಡೆದ ರೂಹುಲ್ಲಾ ಟೆಲಿಗ್ರಾಮ್ ನಲ್ಲಿ ಒಂದು ವಾರ್ತಾ ಚಾನೆಲನ್ನು ಆರಂಭಿಸಿ ಸರಕಾರದ ವಿರುದ್ಧ ನಿರಂತರ ಬರೆಯುತ್ತಿದ್ದರು. ಮತ್ತಷ್ಟು ಮುಂದುವರೆದು ಪ್ರತಿಭಟನೆಯ ಕುರಿತಾದ ನಿಖರವಾದ ಮಾಹಿತಿಗಳನ್ನು ಭಿನ್ನಮತೀಯರಿಗೆ ನೀಡುತ್ತಿದ್ದರು. ಓರ್ವ ರೂಹುಲ್ಲಾ (ಖುಮೈನಿ) ಸ್ಥಾಪಿಸಿದ ಆಡಳಿತವನ್ನು ಇನ್ನೋರ್ವ ರೂಹುಲ್ಲಾ (ಝಮ್) ಕೊನೆಗೊಳಿಸುತ್ತೇನೆ ಎಂದು ಖುದ್ದು ಅವರು ಹೇಳಿದ್ದರು. ಆದರೆ ಝಮ್ ಅವರ ಖಾಸಗಿ ಬದುಕು ಅಷ್ಟೊಂದು ಚೆನ್ನಾಗಿರಲಿಲ್ಲ ಎಂದು ಮರಣ ದಂಡನೆಯನ್ನು ಟೀಕಿಸಿದ ‘ದ ಎಕನಾಮಿಸ್ಟ್’ ವಾರಪತ್ರಿಕೆ ಸೂಚಿಸಿದೆ. ಇರಾಕ್ ಸರಕಾರವು ಓರ್ವ ಮಹಿಳೆಯನ್ನು ಬಳಸಿ ಝಮಿಯನ್ನು ಬಂಧಿಸಿ ಟೆಹ್ರಾನ್‌ಗೆ ತಲುಪಿಸಿತ್ತು.