ಒಂದು ತಿಂಗಳಲ್ಲಿ ಅರ್ನಾಬ್ ರಿಂದ ಶೇ.65, ನಾವಿಕಾರಿಂದ ಶೇ.69 ಸಮಯ ಸುಶಾಂತ್ ಆತ್ಮಹತ್ಯೆ ಚರ್ಚೆಗೆ ಮೀಸಲು!

Prasthutha|

ನವದೆಹಲಿ : ಮುಖ್ಯವಾಹಿನಿಯ ಮಾಧ್ಯಮಗಳೆಂದು ಕರೆಸಿಕೊಳ್ಳುವ ಸುದ್ದಿವಾಹಿನಿಗಳು, ಇತ್ತೀಚಿನ ವರ್ಷಗಳಲ್ಲಿ ಕೇವಲ ಒಂದು ಪಕ್ಷದ ವಕ್ತಾರಿಕೆಯಲ್ಲಿ ನಿರತವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಇದೀಗ ಇಬ್ಬರು ಪ್ರಮುಖ ಪತ್ರಕರ್ತರಾದ ಅರ್ನಾಬ್ ಗೋಸ್ವಾಮಿ ಮತ್ತು ನಾವಿಕಾ ಕುಮಾರ್ ಎಷ್ಟರ ಮಟ್ಟಿಗೆ ಒಂದೇ ವಿಷಯಕ್ಕೆ ಸಂಬಂಧಿಸಿ ಪಕ್ಷಪಾತೀಯರಾಗಿ ವರ್ತಿಸಿದ್ದಾರೆ ಎಂಬುದು ಸಾಕ್ಷಿ ಸಮೇತ ವರದಿಯೊಂದು ಕೋರ್ಟ್ ಗೆ ಸಲ್ಲಿಕೆಯಾಗಿದೆ. ಇತ್ತೀಚೆಗೆ ಸುದರ್ಶನ್ ಟಿವಿ ಪ್ರಕರಣದಲ್ಲಿ ಮಧ್ಯಪ್ರವೇಶಗಾರ್ತಿಯಾಗಿದ್ದ ಲೇಖಕಿ ಮತ್ತು ಸಂಶೋಧಕಿ ಡಾ. ಕೋಟಾ ನೀಲಿಮಾ ಅವರು ವಾಹಿನಿಗಳಲ್ಲಿ ನಡೆಸಲಾಗುವ ಚರ್ಚೆಗಳು ಹೇಗೆ ದ್ವೇಷ ಭಾವನೆಯಿಂದ ಕೂಡಿರುತ್ತವೆ ಎಂಬುದಾಗಿ ನಡೆಸಲಾಗಿರುವ ಸಂಶೋಧನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

- Advertisement -

ಒಂದು ತಿಂಗಳ ಅವಧಿಯಲ್ಲಿ ತಮ್ಮ ಕಾರ್ಯಕ್ರಮಗಳಲ್ಲಿ ಅರ್ನಾಬ್ ಶೇ.65 ಮತ್ತು ನಾವಿಕಾ ಶೇ.69 ಸಮಯವನ್ನು ಕೇವಲ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಚರ್ಚೆಗಳಿಗೆ, ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದರು ಎಂಬುದಾಗಿ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ. ಅರ್ನಾಬ್ ಮತ್ತು ನಾವಿಕಾ ಅವರ ಸುದ್ದಿ ಪ್ರಸಾರ ಅವಧಿ ಮತ್ತು ಚರ್ಚೆಗಳನ್ನು ಸ್ವತಂತ್ರ ಸಂಶೋಧನಾ ವೇದಿಕೆ ‘ರೇಟ್ ದ ಡಿಬೇಟ್’ ಮೌಲ್ಯಮಾಪನ ಮಾಡಿದ್ದು, ಅದನ್ನು ಆಧರಿಸಿ ವಕೀಲ ಸುನೀಲ್ ಫೆರ್ನಾಂಡಿಸ್ ಮೂಲಕ ಕೋರ್ಟ್ ಗೆ ವರದಿ ಸಲ್ಲಿಸಲಾಗಿದೆ.

‘ರಿಪಬ್ಲಿಕ್ ಟಿವಿ’ಯಲ್ಲಿ ಅರ್ನಾಬ್ ಗೋಸ್ವಾಮಿ 32 ದಿನಗಳಲ್ಲಿ (ವಾರಾಂತ್ಯ ಹೊರತುಪಡಿಸಿ) 55 ಗಂಟೆಗಳ ಕಾರ್ಯಕ್ರಮ ಮತ್ತು 76 ಚರ್ಚಾ ವಿಷಯಗಳು ಸೇರಿವೆ. ‘ಟೈಮ್ಸ್ ನೌ’ನಲ್ಲಿ ನಾವಿಕಾ 24 ದಿನಗಳಲ್ಲಿ 20 ಗಂಟೆಗಳ ಕಾರ್ಯಕ್ರಮ ಮತ್ತು 32 ಚರ್ಚಾ ವಿಷಯಗಳ ವಿಶ್ಲೇಷಣೆಯನ್ನು ವರದಿ ಒಳಗೊಂಡಿದೆ.

- Advertisement -

ಕಳೆದ ಜು. 31ರಿಂದ ಸೆ.15ರ ವರೆಗೆ ಅರ್ನಾಬ್ ಶೇ.65ರಷ್ಟು ಮತ್ತು ಜೂ.16ರಿಂದ ಅ.6ರ ವರೆಗೆ ಶೇ.69ರಷ್ಟು ಚರ್ಚೆಯನ್ನು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ನಡೆಸಿದ್ದಾರೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ ಎಂದು ಕೋರ್ಟ್ ಗೆ ಸಲ್ಲಿಕೆಯಾದ ಮನವಿಯಲ್ಲಿ ತಿಳಿಸಲಾಗಿದೆ.

“ಒಂದು ಪ್ರಕರಣಕ್ಕೆ ಅಪಾರ ಸಮಯ ವ್ಯಯಿಸುವುದು ಮಾತ್ರವಲ್ಲ, ಸುದ್ದಿ ಪ್ರಸಾರ ಮತ್ತು ಚರ್ಚೆಯ ವಿಧಾನದಲ್ಲಿನ ಧ್ವನಿ, ಧಾಟಿ ಮತ್ತು ವಿಷಯ ಇವೆಲ್ಲವೂ ವಿಷಯುಕ್ತವೂ, ಧ್ರವೀಕರಣ ಮತ್ತು ಕೊಂಕು ನುಡಿಗಳಿಂದ ಕೂಡಿದ್ದು, ಅಶ್ಲೀಲ ವಿಚಾರಗಳ ಕುರಿತ ಊಹಾಪೋಹಗಳು, ಕೆಟ್ಟ ಆರೋಪಗಳು ಮತ್ತು ಚಾರಿತ್ಯ ಹನನದಿಂದ ತುಂಬಿತ್ತು’’ ಎಂದು ಡಾ. ನೀಲಿಮಾ ಮನವಿಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ಉದ್ದೇಶದಿಂದ ಮಾಧ್ಯಮ ವಿಚಾರಣೆಯ ಮೂಲಕ ಕೆಲವು ಟಿವಿ ವಾಹಿನಿಗಳ ಸುದ್ದಿ ನಿರೂಪಕರು ನಿರಂತರವಾಗಿ ಸುಳ್ಳು ಕತೆಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ವಿಚಾರಣೆಯು ದ್ವೇಷ ಭಾಷೆಯ ಮತ್ತೊಂದು ಮುಖವಾಗಿದೆ ಎಂದು ಡಾ. ನೀಲಿಮಾ ಹೇಳಿದ್ದಾರೆ. “ಅತಿಹೆಚ್ಚು ಟಿಆರ್ ಪಿ ಪಡೆಯುವುದು ಅಥವಾ ಅದಕ್ಕೂ ಮಿಗಿಲಾಗಿ ಕೆಲವು ಖಾಸಗಿ ಸುದ್ದಿ ವಾಹಿನಿಗಳು ಕೇಂದ್ರ ಸರಕಾರದ ಪ್ರಚಾರ ಯಂತ್ರಗಳಾಗಿ ಕೆಲಸ ನಿರ್ವಹಿಸುವುದು ಸೇರಿದಂತೆ ಹಲವು ಕಾರಣಗಳಿಗಾಗಿ ಮಾಧ್ಯಮ ವಿಚಾರಣೆ ನಡೆಸಲಾಗುತ್ತಿದೆ’’ ಎಂದು ಅವರು ತಿಳಿಸಿದ್ದಾರೆ.

ವಿವಾದಿತ ಸುದರ್ಶನ್ ಟಿವಿ ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಿರುವ ಡಾ. ನೀಲಿಮಾ, ಭಾರತದಲ್ಲಿನ ಇಂದಿನ ವಿದ್ಯುನ್ಮಾನ ಮಾಧ್ಯಮಗಳ ಪರಿಸ್ಥಿತಿ ಹಾಗೂ ನಾಜಿ ಆಡಳಿತದ ಜರ್ಮನಿಯ ಪರಿಸ್ಥಿತಿಗೂ ಹೋಲಿಕೆ ಇದೆ ಎಂದು ಆರೋಪಿಸಿದ್ದರು.



Join Whatsapp