15ನೇ ಆವೃತ್ತಿಯ ಐಪಿಎಲ್ ನಲ್ಲಿ ಕನಿಷ್ಠ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ತಂಡವನ್ನು ನಿಯಂತ್ರಿಸಿದ ಡೆಲ್ಲಿ ಕ್ಯಾಪಿಟಲ್ಸ್, ಬಳಿಕ ವಾರ್ನರ್- ಪೃಥ್ವಿ ಶಾ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಭರ್ಜರಿ ಜಯ ದಾಖಲಿಸಿದೆ.
ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ಕೇವಲ 115 ರನ್ ಗಳಿಸುವಷ್ಟರಲ್ಲಿ ಅಲೌಟ್ ಆಗಿತ್ತು. ಸುಲಭ ಗುರಿಯನ್ನು 10.3 ಓವರ್ ಗಳಲ್ಲಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು.
ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಂಪ್ ಒತ್ತಡದಲ್ಲಿತ್ತು. ಆದರೆ ಪಂದ್ಯದಲ್ಲಿ ಪೂರ್ಣ ಪಾರಮ್ಯ ಮೆರೆಯಿತು. ಟಾಸ್ ಗೆದ್ದು ಪಂಜಾಬ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿ ಸ್ಪಿನ್ ಬಲೆಯಲ್ಲಿ ಕೆಡವಿತು. ಎಡಗೈ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (2/23), ಆಫ್ ಸ್ಪಿನ್ನರ್ ಲಲಿತ್ ಯಾದವ್ (11ಕ್ಕೆ 2) ಮತ್ತು ಅಕ್ಷರ್ ಪಟೇಲ್ (10ಕ್ಕೆ 2) ಖಲೀಲ್ ಅಹ್ಮದ್ (21ಕ್ಕೆ 2) ದಾಳಿಗೆ ಪಂಜಾಬ್ ಪೆವಿಲಿಯನ್ ಪರೇಡ್ ನಡೆಸಿತು. ಜಿತೇಶ್ ಶರ್ಮಾ (32) ಮತ್ತು ಮಯಾಂಕ್ ಅಗರ್ವಾಲ್ (24) ಹೊರತಾಗಿ ಉಳಿದ ಬ್ಯಾಟ್ಸ್ಮನ್ ಗಳು ರನ್ ಗಳಿಸಲು ಮರೆತವರಂತೆ ಬ್ಯಾಟ್ ಬೀಸಿದರು. ಪರಿಣಾಮ 20 ಓವರ್ ಗಳಲ್ಲಿ 115 ರನ್ ಗಳಿಗೆ ಅಲೌಟ್ ಆಗಿತ್ತು. ಇದು ಐಪಿಎಲ್ 2022 ಟೂರ್ನಿಯಲ್ಲಿ ದಾಖಲಾದ ಅತ್ಯಂತ ಕಡಿಮೆ ಮೊತ್ತವಾಗಿದೆ.
ಬಿರುಸಿನಿಂದ ಬ್ಯಾಟ್ ಬೀಸಿದ ಡೆಲ್ಲಿ ಕ್ಯಾಪಿಟಲ್ಸ್ ಗೆ, ಆರಂಭಿಕರಾದ ಪೃಥ್ವಿ ಶಾ (20 ಎಸೆತಗಳಲ್ಲಿ 41 ರನ್) ಮತ್ತು ವಾರ್ನರ್ (30 ಎಸೆತಗಳಲ್ಲಿ 60 ರನ್) ಸ್ಪೋಟಕ ಆರಂಭ ಒದಗಿಸಿದ್ದರು. ಐಪಿಎಲ್ ವೃತ್ತಿ ಬದುಕಿನಲ್ಲಿ ವಾರ್ನರ್ 53ನೇ ಅರ್ಧಶತಕ ಪೂರ್ತಿಗೊಳಿಸಿದರು. ಮೊದಲ ವಿಕೆಟ್ಗೆ ಇವರಿಬ್ಬರು 6.3 ಓವರ್ಗಳಲ್ಲಿ 83 ರನ್ ಪೇರಿಸಿದ್ದರು. ಶಾ ನಿರ್ಗಮನದ ಬಳಿಕ ಬಂದ ಸರ್ಫರಾಝ್ ಖಾನ್ 12 ರನ್ಗಳಿಸಿದರು. 9 ವಿಕೆಟ್ ಅಂತರದ ಜಯದೊಂದಿಗೆ ಐಪಿಎಲ್ 2022 ಟೂರ್ನಿಯ ಅಂಕಪಟ್ಟಿಯಲ್ಲಿ ಡೆಲ್ಲಿ ತಂಡ 6ನೇ ಸ್ಥಾನಕ್ಕೇರಿದೆ.
ಸಂಕ್ಷಿಪ್ತ ಸ್ಕೋರ್
ಪಂಜಾಬ್ ಕಿಂಗ್ಸ್: 115 ರನ್ ಗಳಿಗೆ ಆಲೌಟ್ (20 ಓವರ್)
ಮಯಾಂಕ್ ಅಗರ್ವಾಲ್ 24, ಜಿತೇಶ್ ಶರ್ಮಾ 32
ಅಕ್ಷರ್ ಪಟೇಲ್ 2/10, ಕುಲ್ದೀಪ್ ಯಾದವ್ 2/23, ಲಲಿತ್ ಯಾದವ್ 2/11, ಖಲೀಲ್ ಅಹ್ಮದ್ 2/21.
ಡೆಲ್ಲಿ ಕ್ಯಾಪಿಟಲ್ಸ್: 119/1 (10.3 ಓವರ್)
ಪೃಥ್ವಿ ಶಾ 41, ಡೇವಿಡ್ ವಾರ್ನರ್ 60*;
ರಾಹುಲ್ ಚಹರ್ 1/21
ಪಂದ್ಯಶ್ರೇಷ್ಠ: ಕುಲ್ದೀಪ್ ಯಾದವ್