ನವದೆಹಲಿ : ಏಕರೂಪ ನಾಗರಿಕ ಸಂಹಿತೆ ಕುರಿತು ಸಾರ್ವಜನಿಕ ಚರ್ಚೆ ನಡೆಯಬೇಕು ಎಂದು ಆಡಳಿತಾರೂಢ ಬಿಜೆಪಿ ಬೆಂಬಲಿಗ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. ಆದರೆ, ಇಂತಹ ಸಮಯದಲ್ಲಿ ಈ ಮಸೂದೆ ತರಬೇಕೇ? ಬೇಡವೇ? ಎಂಬುದರ ಬಗ್ಗೆ ನಿರ್ಧರಿಸುವುದು ಸರಕಾರಕ್ಕೆ ಬಿಟ್ಟಿರುವುದು ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಆರೆಸ್ಸೆಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ, ‘ಇಂಡಿಯಾ ಫೌಂಡೇಶನ್’ ಎಂಬ ಸಂಸ್ಥೆ ಆಯೋಜಿಸಿದ್ದ ವರ್ಚುವಲ್ ಸಭೆಯಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ಸಂವಿಧಾನದ ರಾಜ್ಯ ನೀತಿಯ ನಿರ್ದೇಶಕ ತತ್ವಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಸ್ತಾಪಿಸಲಾಗಿದೆ. ಆದರೆ, ಸಂವಿಧಾನ ನಿರ್ಮಾತೃಗಳು ಅದನ್ನು ಜಾರಿಗೊಳಿಸುವುದಕ್ಕೆ ಕಾಲಮಿತಿ ನಿಗದಿಪಡಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
“ನಾವು ಈ ಬಗ್ಗೆ ಮೊದಲು ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ಈ ಕುರಿತು ಸರಿಯಾದ ರೀತಿಯ ಸಾರ್ವಜನಿಕ ಚರ್ಚೆಗಳು ನಡೆಯಬೇಕು. ಜನರನ್ನು ಜಾಗೃತಿಗೊಳಿಸುವುದು ಅತ್ಯಂತ ಮುಖ್ಯವಾದುದು ಎಂದು ಅವರು ತಿಳಿಸಿದ್ದಾರೆ.