ಶಿವಮೊಗ್ಗ : ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 74 ವರ್ಷಗಳಾಗುತ್ತಿದ್ದರೂ, ದೇಶದಲ್ಲಿ ಇನ್ನೂ ಅಸಂಖ್ಯಾತ ಜನರು ಅಲೆಮಾರಿಗಳಾಗಿ, ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಇಂತಹ ಅಲೆಮಾರಿ ಕುಟುಂಬಗಳ ಮಕ್ಕಳೂ ಶಿಕ್ಷಣ, ಮೂಲಭೂತ ಸೌಕರ್ಯಗಳಿಲ್ಲದೆ, ತಮ್ಮ ಹೆತ್ತವರ ಬದುಕನ್ನೇ ಬದುಕುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿಯ ಜೋಪಡಿಯಲ್ಲಿ ನೆಲೆಸಿರುವ ಅಲೆಮಾರಿ ಜನಾಂಗದ ವಿದ್ಯಾರ್ಥಿನಿಯೊಬ್ಬಳು, ತನ್ನ ಜನಾಂಗದ ಇತಿಹಾಸದಲ್ಲೇ ಮೊದಲ ಬಾರಿ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿದ್ದಾಳೆ. ವಿದ್ಯಾರ್ಥಿನಿ ಅನುಷಾ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು, ಟೆಂಟ್ ನಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆಗೆ ಹೋಗುತ್ತಿದ್ದ ಅನುಷಾ, ಟೆಂಟ್ ನಲ್ಲಿ ಕ್ಯಾಂಡಲ್ ದೀಪದ ಬೆಳಕಿನಲ್ಲಿ ಓದುತ್ತಿದ್ದಳು.
ಆಕೆಯ ತಾಯಿ ಇಂದ್ರಮ್ಮ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಶಾಲೆ ಮುಗಿದ ನಂತರ ಬೇರೆಯವರ ಮನೆಗಳಲ್ಲಿ ಕಸ ಮುಸುರೆ ತಿಕ್ಕುವ ಕೆಲಸ ಮಾಡುತ್ತಾ, ಜೀವನ ನಿರ್ವಹಣೆಗೆ ಸ್ವತಃ ಅನುಷಾ ತಾಯಿಗೆ ನೆರವಾಗಿದ್ದಾಳೆ. ಇಷ್ಟೊಂದು ಸಮಸ್ಯೆಗಳ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ 315 ಅಂಕಗಳನ್ನು ಗಳಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ.