ಎಲ್ಲಾ ಅಕ್ರಮ ಗಣಿಗಾರಿಕೆ ತಕ್ಷಣ ನಿಲ್ಲಿಸಿ; ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

Prasthutha|

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಕ್ರಮ ಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಗಣಿಗಾರಿಕೆಗೆ ಅರ್ಜಿ ಹಾಕಿ ನಂತರ ಪರವಾನಿಗೆ ಪಡೆಯಬೇಕು. ಅಧಿಕಾರಿಗಳು ಸ್ಥಳ ಭೇಟಿ ಪರಿಶೀಲನೆ ಬಳಿಕವಷ್ಟೇ ಅನುಮತಿ ನೀಡಲಾಗುವುದು. ಆದರೆ, ಸದ್ಯಕ್ಕೆ ಎಲ್ಲಾ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಬೇಕು ಎಂದು ಸೂಚಿಸಿದರು.
ಬೇಬಿ ಬೆಟ್ಟದ ಬಳಿ ಅಕ್ರಮ ಗಣಿಗಾರಿಗೆ ನಡೆಯುತ್ತಿದೆ. ಇದರಿಂದ ಕೆಆರ್ ಎಸ್ ಅಣೆಕಟ್ಟೆಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಹಲವು ಬಾರಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇವೆ. ಅಭಿವೃದ್ಧಿ ಕಾರ್ಯಗಳಿಗೆ ಜಲ್ಲಿ ಕಲ್ಲು ಅಗತ್ಯವಾಗಿ ಬೇಕಾಗುತ್ತದೆ. ಆದರೂ ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಭೋವಿ ವಡ್ಡರ ಸಮಾಜದವರು ಕಲ್ಲು ಹೊಡೆಯುತ್ತಾರೆ. ಇದರಿಂದ ಯಾವುದೇ ಅನಾಹುತ ಸಂಭವಿಸುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಜಲ್ಲಿ ಕೊರತೆ ಆಗಬಾರದು ಎಂದು ತಿಳಿಸಿದರು.
ನಿನ್ನೆ ತಾವು ನೀಡಿದ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಅರ್ಜಿ ಹಾಕಿ ಸಕ್ರಮ ಮಾಡಿಕೊಳ್ಳಬೇಕು ಎಂದು ಹೇಳಿದ್ದೇನೆ, ಅಕ್ರಮ ಗಣಿಗಾರಿಕೆ ನಡೆದರೇ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಕೆ.ಪಿ.ಎಸ್.ಸಿ. ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪರೀಕ್ಷೆ ಮುನ್ನವೇ ಪೇಪರ್ ಸೋರಿಕೆ ಆಗಿರುವುದು ಅಕ್ಷಮ್ಯ ಅಪರಾಧ. ಈ ಬಗ್ಗೆ ನಿನ್ನೆ ರಾತ್ರಿಯೇ ಮಾಹಿತಿ ಪಡೆದಿದ್ದು, ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದರೆ ಹುದ್ದೆಯಿಂದ ವಜಾಗೊಳಿಸಲು ಸೂಚಿಸಲಾಗಿದೆ ಎಂದು ಎಂದು ಯಡಿಯೂರಪ್ಪ ತಿಳಿಸಿದರು.
ಜ. 26 ಕ್ಕೆ ರೈತರ ಹೋರಾಟದ ಪ್ರತಿಕ್ರಿಯಿಸಿದ ಅವರು, ರೈತರ ಹೋರಾಟಕ್ಕೆ ತಮ್ಮ ವಿರೋಧವಿಲ್ಲ. ಸರ್ಕಾರ ರೈತರ ಪರ ಇದೆ. ರೈತರು ಶಾಂತ ರೀತಿಯಿಂದ ಪ್ರತಿಭಟನೆ ಮಾಡಬೇಕು ಎಂದು ಸಲಹೆ ನೀಡಿದರು.
ಹುಣಸೋಡು ಸ್ಫೋಟ ದುರಂತದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಮೃತರ ಕುಟುಂಬಗಳಿಗೆ ಐದು ಲಕ್ಷ ಪರಿಹಾರ ನೀಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.



Join Whatsapp