ಲಖನೌ : ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ ದೌರ್ಜನ್ಯಕ್ಕೆ ಲೆಕ್ಕವೇ ಇಲ್ಲ. ಇದೀಗ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕ್ರಮವೊಂದರ ಕುರಿತು ಸ್ಟೇಟಸ್ ಹಂಚಿಕೊಂಡ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬರಿಗೆ ಅಲ್ಲಿನ ಪೊಲೀಸರು ಕಿರುಕುಳ ನೀಡಿದ ಘಟನೆ ವರದಿಯಾಗಿದೆ.
ಆ.14ರಂದು ಹೈದರಾಬಾದ್ ನ ಮೌಲಾನಾ ಆಜಾದ್ ನ್ಯಾಶನಲ್ ಉರ್ದು ವಿಶ್ವವಿದ್ಯಾಲಯದ ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ ಮುಹಮ್ಮದ್ ಮಿಸ್ಬಾ ಜಾಫರ್, ಆ.15ರ ಕಾರ್ಯಕ್ರಮದ ಬಗ್ಗೆ ಪೋಸ್ಟ್ ಮಾಡಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಸಂಜೆ ‘ಸ್ವಾತಂತ್ರ್ಯ ದಿನದ ಸಂದೇಶ’ ಎಂಬ ಫೇಸ್ ಬುಕ್ ಲೈವ್ ಕಾರ್ಯಕ್ರಮದ ಬಗ್ಗೆ ಪೋಸ್ಟ್ ಹಾಕಿದ್ದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಕಲೀಂ ತುಮಕೂರು ಅವರು ಈ ಲೈವ್ ಕಾರ್ಯಕ್ರಮದಲ್ಲಿ ಮಾತನಾಡುವವರಿದ್ದರು. ಆ.15ರ ನಸುಕಿನ 2:30ರ ವೇಳೆಗೆ ಸುಮಾರು 10 ಮಂದಿ ಪೊಲೀಸರು ಜಾಫರ್ ಅವರ ಉತ್ತರ ಪ್ರದೇಶದ ಬಹ್ರೇಚ್ ನ ಜರ್ವಾಲ್ ನ ನಿವಾಸಕ್ಕೆ ಆಗಮಿಸಿ ವಶಕ್ಕೆ ಪಡೆದಿದ್ದಾರೆ.
‘’ಮಧ್ಯರಾತ್ರಿಯ ನಂತರ ಅವರು ಮನೆಗೆ ಆಗಮಿಸಿ ಮನೆ ಬಾಗಿಲು ಬಡಿದರು. ನನ್ನ ಅಣ್ಣ ಬಾಗಿಲು ತೆಗೆದಾಗ, ಪೊಲೀಸರು ನನ್ನನ್ನು ತನಿಖೆ ಮಾಡಬೇಕೆಂದು ತಿಳಿಸಿದರು. ನನಗೆ (ಜಾಫರ್) ಸ್ವಾತಂತ್ರ್ಯ ಬೇಕಿದ್ದಲ್ಲಿ ನಾನು ಜೈಲಿಗೆ ಹೋಗಬಹುದು. ಅವನಿಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಪೊಲೀಸರು ತಿಳಿಸಿದುದಾಗಿ ಜಾಫರ್ ಹೇಳಿದ್ದಾನೆ. ಪೊಲೀಸ್ ಠಾಣೆಗೆ ತೆರಳುವ ವೇಳೆ ಮನಬಂದಂತೆ ನಿಂದನೆ ಮಾಡಿದರು.’’
“ನಿಮಗೆ ಆಹಾರ, ಆಶ್ರಯ ನೀಡುವ ಭಾರತ ಸರಕಾರದ ಮೇಲೆ ಯಾಕೆ ಅಗೌರವ ತೋರುತ್ತೀರಿ? ಇಮ್ರಾನ್ ಖಾನ್ ನ ಕಾನೂನು ಭಾರತದಲ್ಲಿ ಜಾರಿಗೊಳಿಸಬೇಕೆಂದು ನೀನು ಬಯಸುತ್ತೀಯಾ? ಇದನ್ನೆಲ್ಲ ಮಾಡುವುದಕ್ಕೆ ನಿನಗೆ ಯಾವ ಸಂಘಟನೆಯ ಬೆಂಬಲವಿದೆ? ಎಂದು ಅವರು ನನ್ನನ್ನು ಪ್ರಶ್ನಿಸಿದರು. ನಾನು ಸರಕಾರವನ್ನಷ್ಟೇ ಪ್ರಶ್ನಿಸುತ್ತಿದ್ದೇನೆ. ಅದು ದೇಶದ್ರೋಹ ಎಂದು ನಿಮಗನಿಸಿದರೆ ಅದು ನಿಮ್ಮ ತಪ್ಪು’’ ಎಂದು ನಾನು ಹೇಳಿದೆ ಎಂದು ಜಾಫರ್ ಹೇಳಿದ್ದಾರೆ.
ಜಾಫರ್ ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು 12 ಗಂಟೆಗಳ ಕಾಲ ವಶದಲ್ಲಿರಿಸಲಾಗಿತ್ತು. ಪೊಲೀಸರು ತಾನು ಕ್ಷಮೆ ಯಾಚನೆ ಪತ್ರ ಬರೆಯಬೇಕೆಂದು ಬಯಸಿದ್ದರು. ಆದರೆ, ತನಗೆ ಅದು ಸಮ್ಮತವಾಗಿರಲಿಲ್ಲ ಎಂದು ಜಾಫರ್ ತಿಳಿಸಿದ್ದಾರೆ. ತಾನು ಕ್ಷಮಾಯಾಚನೆ ಪತ್ರ ಬರೆಯದಿದ್ದಲ್ಲಿ ತನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವುದಾಗಿಯೂ, ತನ್ನ ಹೆತ್ತವರ ಆಸ್ತಿ ಮುಟ್ಟುಗೋಲು ಹಾಕುವುದಾಗಿಯೂ ಅವರು ಬೆದರಿಕೆಯೊಡ್ಡಿದರು ಎಂದು ಜಾಫರ್ ಹೇಳಿದ್ದಾರೆ. ಸರಕಾರವನ್ನು ಟೀಕಿಸಿದರೆ ದೇಶದ್ರೋಹ ಎಂಬುದು ಯಾವಾಗಿನಿಂದ ಆಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಜಿಲ್ಲಾ ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿದ ಬಳಿಕವಷ್ಟೇ ಜಾಫರ್ ರನ್ನು ಬಿಡುಗಡೆಗೊಳಿಸಲಾಯಿತು. ಆದಾಗ್ಯೂ, ಜಾಫರ್ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಆದರೆ, ಸ್ವಾತಂತ್ರ್ಯ ದಿನಾಚರಣೆ ದಿನ ವಿದ್ಯಾರ್ಥಿಯೊಬ್ಬನಿಗೆ ಈ ರೀತಿ ಕಿರುಕುಳ ಕೊಟ್ಟಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.