ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ನಿವಾಸದ ಅಡಿಯಲ್ಲಿ ‘ಶಿವಲಿಂಗ’ ಇದೆ. ಇಲ್ಲಿ ಉತ್ಖನನ ನಡೆಯಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಅವರು ಹೀಗೆ ಹೇಳಿದರು. ಈ ಮೂಲಕ, ಪುರಾತನ ಕಾಲದಲ್ಲಿ ದೇಗುಲ ಇತ್ತು ಎಂಬ ಶಂಕೆ ಮೇಲೆ ಸಂಭಲ್ ಮಸೀದಿ ಸೇರಿ ರಾಜ್ಯದ ಹಲವು ಸ್ಥಳಗಳಲ್ಲಿ ಉತ್ಖನನ ನಡೆಸುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರವನ್ನು ಟೀಕಿಸಿದರು.
ಬಿಜೆಪಿ ಸರ್ಕಾರವು “ತನ್ನ ವೈಫಲ್ಯವನ್ನು ಮರೆಮಾಡಲು” ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ವಿವಿಧ ಸ್ಥಳಗಳಲ್ಲಿ ಉತ್ಖನನ ಮಾಡುತ್ತಿದೆ.
“ಮುಖ್ಯಮಂತ್ರಿಯವರ ನಿವಾಸದ ಕೆಳಗೆ ಶಿವಲಿಂಗವಿದೆ ಎಂದು ನಾವು ನಂಬುತ್ತೇವೆ. ಅಲ್ಲಿಯೂ ಉತ್ಖನನ ನಡೆಸಬೇಕು” ಎಂದು ಅವರು ಹೇಳಿದರು.
“ಬುಲ್ಡೋಜರ್ ಗಳಿಂದ ಅಮಾಯಕರ ಮನೆಗಳನ್ನು ಅಕ್ರಮವಾಗಿ ಕೆಡವಲಾಗುತ್ತಿದೆ” ಎಂದು ಆರೋಪಿಸಿದರು.