ಬರೇಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಇನ್ನೊಂದು ನಕಲಿ ‘ಲವ್ ಜಿಹಾದ್’ ಪ್ರಕರಣ ಬಯಲಿಗೆ ಬಂದಿದೆ. 24ರ ಹರೆಯದ ಹಿಂದೂ ಮಹಿಳೆಯನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎಂಬ ಸುಳ್ಳು ಆರೋಪವನ್ನು ಮುಸ್ಲಿಮ್ ವ್ಯಕ್ತಿಗಳ ವಿರುದ್ಧ ಹೊರಿಸಿದ ಘಟನೆ ನಡೆದಿದೆ.
ಪ್ರಕರಣವು ಸುಳ್ಳು ಎಂದು ತಿಳಿದ ನಂತರ ಪೊಲೀಸರು ಎಫ್.ಐ.ಆರ್ ರದ್ದುಗೊಳಿಸಿದ್ದಾರೆ ಎಂದು ಬರೇಲಿಯ ಎಸ್.ಎಸ್.ಪಿ ರೋಹಿತ್ ಸಿಂಗ್ ಸಜ್ವಾನ್ ಪಿ.ಟಿ.ಐಗೆ ತಿಳಿಸಿದ್ದಾರೆ.
“ದೂರುದಾರನ ಪ್ರಕಾರ ಕಳೆದ ವರ್ಷ ಡಿಸೆಂಬರ್ 1 ರಂದು ಹುಡುಗಿ ಫರೀದಾ ಪುರದಿಂದ ತನ್ನ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಬ್ರಾರ್ ತನ್ನ ಸೋದರ ಸಂಬಂಧಿಗಳಾದ ಮೈಸುರ್ ಮತ್ತು ಇರ್ಶಾದ್ ನೊಂದಿಗೆ ಸೇರಿ ನಿಕಾಹ್ ಗಾಗಿ ಆಕೆಯನ್ನು ಬಲವಂತವಾಗಿ ಮತಾಂತರಿಸಲು ಪ್ರಯತ್ನಿಸಿದ್ದರು” ಎಂದು ಬರೇಲಿಯ ಎಸ್.ಎಸ್.ಪಿ ರೋಹಿತ್ ಸಿಂಗ್ ಸಜ್ವಾನ್ ಪಿಟಿಐಗೆ ತಿಳಿಸಿದರು.
“ಆದರೆ ಆ ದಿನ ಆರೋಪಿಗಳು ಸ್ಥಳದಲ್ಲಿರಲಿಲ್ಲ ಎಂದು ಪೊಲೀಸರು ಶೋಧಿಸಿದ್ದಾರೆ. ಪೊಲೀಸರು ಸಂಗ್ರಹಿಸಿದ ಪುರಾವೆಗಳ ಪ್ರಕಾರ ಮೂವರ ವಿರುದ್ಧ ಮಹಿಳೆ ಮತ್ತು ಆಕೆಯ ಸೋದರ ಮಾವ ಸಲ್ಲಿಸಿದ ಆರೋಪಗಳು ತಪ್ಪು ಮತ್ತು ಕಾನೂನಿನ ನಿಬಂಧನೆಗಳ ಆಧಾರದಲ್ಲಿ ಪ್ರಕರಣವನ್ನು ತಿರಸ್ಕರಿಸಲಾಗುವುದು” ಎಂದು ಎಸ್.ಎಸ್.ಪಿ ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಇತ್ತೀಚೆಗೆ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದಿದೆ. ಈ ಕಾನೂನು ಆಯ್ಕೆಯ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆಯೆಂದು ತೀವ್ರ ಟೀಕೆಗೆ ಗುರಿಯಾಗುತ್ತಿದೆ. ಮುಸ್ಲಿಮರ ಮೇಲೆ ದಾಳಿಗೆ ಬಲಪಂಥೀಯ ಅಜೆಂಡಾ ಎಂಬುದಾಗಿ ಈ ಕಾನೂನನ್ನು ಬಣ್ಣಿಸಲಾಗುತ್ತಿದೆ.
ಮುಸ್ಲಿಮ್ ಪುರುಷರನ್ನು ಪೊಲೀಸರು ಲವ್ ಜಿಹಾದ್ ಪ್ರಕರಣದಲ್ಲಿ ಬಂಧಿಸಿ ನಂತರ ಬಿಡುಗಡೆಗೊಳಿಸಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.