ಆನಂದ್‌ ತೇಲ್ತುಂಬ್ಡೆಗೆ ಮತ್ತೆ ಜಾಮೀನು ನಿರಾಕರಿಸಿದ ಮುಂಬೈ ಎನ್‌ಐಎ ನ್ಯಾಯಾಲಯ

Prasthutha|

ಮುಂಬೈ, ಜು.13: ಭೀಮಾ ಕೋರೆಗಾಂವ್‌ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ತಲೋಜಾ ಜೈಲಿನಲ್ಲಿ ಬಂಧಿತರಾಗಿರುವ ದಲಿತ ಚಿಂತಕ, ವಿದ್ವಾಂಸ ಆನಂದ್‌ ತೇಲ್ತುಂಬ್ಡೆ ಅವರಿಗೆ ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯ ಸೋಮವಾರ ಜಾಮೀನು ನಿರಾಕರಿಸಿದೆ.

- Advertisement -


ತಮ್ಮ ವಿರುದ್ಧ ಪ್ರಥಮ ವರ್ತಮಾನ ವರದಿ ಹಾಗೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಆರೋಪಗಳನ್ನು ನಿರೂಪಿಸುವಲ್ಲಿ ತನಿಖಾ ಸಂಸ್ಥೆಗಳು ಹಾಗೂ ಎನ್‌ಐಎ ಸೋತಿವೆ. ಅಲ್ಲದೆ, ತಮ್ಮ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಎನ್‌ಐಎ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂದು ತೇಲ್ತುಂಬ್ಡೆ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಜುಲೈ 13, 2020 ರಂದು ಆನಂದ್‌ ತೇಲ್ತುಂಬ್ಡೆ ಅವರ ಮೊದಲ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಎರಡನೇ ಜಾಮೀನು ಅರ್ಜಿಯನ್ನು ವಿಶೇಷ ಎನ್ಐಎ ನ್ಯಾಯಾಧೀಶ ಡಿ.ಇ. ಕೊಥಲಿಕರ್ ಸೋಮವಾರ ತಿರಸ್ಕರಿಸಿದ್ದಾರೆ.
ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಯಾವುದೇ ತಡೆ ನೀಡಲು ನಿರಾಕರಿಸಿದ ನಂತರ ಆನಂದ್‌ ತೇಲ್ತುಂಬ್ಡೆ ಏಪ್ರಿಲ್ 14, 2020 ರಂದು ಎನ್‌ಐಎ ಕಚೇರಿಯಲ್ಲಿ ಶರಣಾಗಿದ್ದರು. ಆರಂಭದಲ್ಲಿ ಅವರನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ತಾಲೋಜಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿತ್ತು.
ಪೆಟ್ರೋನೆಟ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿರುವ ಆನಂದ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐಐಎಂ ಪದವೀಧರರಾಗಿದ್ದಾರೆ. ಅಲ್ಲಿಯೇ ಪ್ರಾಧ್ಯಾಪಕರೂ ಆಗಿದ್ದಾರೆ. ನಿಷೇಧಿತ ಸಿಪಿಐ (ಮಾವೋವಾದಿಗಳು) ಗೆ ಸಂಪರ್ಕವಿದೆ ಎಂದು ಆರೋಪಿಸಿ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಯ ಹಲವು ಸೆಕ್ಷನ್ ಗಳಡಿ ಅವರ ಮೇಲೆ ಆರೋಪ ಹೊರಿಸಲಾಗಿದೆ.
ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನ್ ಸ್ವಾಮಿ ಅವರು ಇತ್ತೀಚೆಗಷ್ಟೇ ಸೆರೆಯಲ್ಲಿದ್ದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.



Join Whatsapp