ಬೆಂಗಳೂರು: ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷಾ ಸಂಸ್ಥೆಯಾದ ಆಕಾಶ್ ಎಜ್ಯುಕೇಶನಲ್ ಸರ್ವೀಸ್ ಅನ್ನು ಬೈಜೂಸ್ ನೂರು ಕೋಟಿ ಡಾಲರ್(ಅಂದಾಜು 7400ಕೋಟಿ ರೂ.)ಗೆ ಖರೀದಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಎಜ್ಯು-ಟೆಕ್ ವಲಯದಲ್ಲಿ ಇದು ದೇಶದ ಅತಿದೊಡ್ಡ ಖರೀದಿಯಾಗಿದೆ. ಭಾರತದಾದ್ಯಂತ ಆಕಾಶ್ ಅಡಿಯಲ್ಲಿ 200 ಕ್ಕೂ ಹೆಚ್ಚು ಸಂಸ್ಥೆಗಳಿವೆ. 1988 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು 2.5 ಲಕ್ಷ ವಿದ್ಯಾರ್ಥಿಗಳನ್ನು ಹೊಂದಿದೆ.
2019 ರಲ್ಲಿ ಆಕಾಶ್ ತನ್ನ 37.9% ಪಾಲನ್ನು ಯುಎಸ್ ಹೂಡಿಕೆ ಸಂಸ್ಥೆಯಾದ ಬ್ಲಾಕ್‌ಸ್ಟೋನ್‌ಗೆ ಮಾರಿತ್ತು. ಬೈಜೂಸ್‌ನ ಆಗಮನದೊಂದಿಗೆ ಆಕಾಶ್‌ನ ಮಾಲೀಕರಾದ ಚೌಧರಿ ಗ್ರೂಪ್ ಸಂಸ್ಥೆಯಿಂದ ಸಂಪೂರ್ಣವಾಗಿ ಹಿಂದೆ ಸರಿಯಲಿದೆ. ಸಂಸ್ಥೆಯು ಎರಡು ಮೂರು ತಿಂಗಳಲ್ಲಿ ಪೂರ್ಣವಾಗಿ ಬೈಜೂಸ್ ಸ್ವಾಧೀನಕ್ಕೆ ಬರಲಿದೆ. ಇದಕ್ಕೂ ಮುನ್ನ ಆಗಸ್ಟ್ ನಲ್ಲಿ ಬೈಜೂಸ್ ಮುಂಬೈ ಮೂಲದ ವೈಟ್ ಹ್ಯಾಟ್ ಜೂನಿಯರ್ ಅನ್ನು ಸುಮಾರು 2,000 ಕೋಟಿ ರೂ.ಗೆ ಖರೀದಿಸಿತ್ತು. ಬೆಂಗಳೂರು ಮೂಲದ ಬೈಜೂಸ್ 12 ಬಿಲಿಯನ್ ಯುಎಸ್ ಡಾಲರ್ ಆಸ್ತಿಯನ್ನು ಹೊಂದಿದೆ.
ಫೇಸ್‌ಬುಕ್ ಸಿಇಒ ಚಾನ್ ಜುಗರ್ಬರ್ಕ್ ಇನಿಶಿಯೇಟಿವ್, ಯುಎಸ್ ಮೂಲದ ಟ್ಯೂಟರ್ ವಿಸ್ಟಾ ಮತ್ತು ಎಜುರೈಟ್ ಇತರ ಸಂಸ್ಥೆಗಳು ಬೈಜೂಸ್‌ನಲ್ಲಿ ಹೂಡಿಕೆ ಮಾಡಿದೆ. 2011ರಲ್ಲಿ ಕೇರಳ ಮೂಲದ ಬೈಜು ರವೀಂದ್ರನ್ ಆನ್‌ಲೈನ್ ಬೋಧನೆಗಾಗಿ ಬೈಜೂಸ್ ಅನ್ನು ಸ್ಥಾಪಿಸಿದ್ದರು. ಕೋವಿಡ್‌ನಿಂದಾಗಿ ಆಫ್‌ಲೈನ್ ಬೋಧನಾ ಕೇಂದ್ರಗಳನ್ನು ಮುಚ್ಚಿದ್ದರಿಂದ ಬೈಜೂಸ್ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿತ್ತು.