ಅಮೆರಿಕದಲ್ಲಿ ಮತ್ತೆ ಕರಿಯ ವ್ಯಕ್ತಿಯ ಮೇಲೆ ಪೊಲೀಸ್ ದಾಳಿ | ಭುಗಿಲೆದ್ದ ಪ್ರತಿಭಟನೆ | ತುರ್ತು ಪರಿಸ್ಥಿತಿ ಜಾರಿ | ಶೂಟೌಟ್ ಗೆ ಇಬ್ಬರು ಬಲಿ

Prasthutha|

ಮ್ಯಾಡಿಸನ್ : ವಿಸ್ಕೊನ್ಸಿನ್ ನಲ್ಲಿ ಕರಿಯ ವ್ಯಕ್ತಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಅಮೆರಿಕದಲ್ಲಿ ಮತ್ತೊಮ್ಮೆ ಪ್ರತಿಭಟನೆ ಭುಗಿಲೆದ್ದಿದೆ. ಹೀಗಾಗಿ ವಿಸ್ಕೊನ್ಸಿನ್ ನಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ.

- Advertisement -

ಕರಿಯ ವ್ಯಕ್ತಿ ಜಾಕೊಬ್ ಬ್ಲೇಕ್ ಮೇಲೆ ಪೊಲೀಸರು ಹಿಂದಿನಿಂದ ಗುಂಡಿನ ದಾಳಿ ನಡೆಸಿದ್ದು, ಆತನ ಸೊಂಟದ ಕೆಳಗೆ ಬಲ ಕಳೆದುಕೊಂಡಿದ್ದು, ದೇಹದಲ್ಲಿ ಎಂಟು ರಂಧ್ರಗಳಾಗಿವೆ. ವಿಸ್ಕೊನ್ಸಿನ್ ನ ಕೆನೊಶದಲ್ಲಿ ರವಿವಾರ ಹಾಡಹಗಲೇ ಪೊಲೀಸರು ಗುಂಡಿನ ದಾಳಿ ನಡೆಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಅಲ್ಲಿನ ಕೆಲವು ನಗರಗಳಲ್ಲಿ ಮತ್ತೆ ಪ್ರತಿಭಟನೆ ಭುಗಿಲೇಳುವಂತೆ ಮಾಡಿದೆ. ಕೆನೊಶದಲ್ಲಿ ಮೂರನೇ ದಿನವೂ ಪ್ರತಿಭಟನೆಯ ತೀವ್ರತೆ ಹೆಚ್ಚಿದ್ದು, ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ.

ಮಿನ್ನೆಪೊಲಿಸ್ ಪೊಲೀಸರಿಂದ ಜಾರ್ಜ್ ಫ್ಲಾಯ್ಡ್ ಎಂಬಾತನ ಅಮಾನವೀಯ ಸಾವು ಸಂಭವಿಸಿದ ಬಳಿಕ, ಪೊಲೀಸರ ಜನಾಂಗೀಯ ದೌರ್ಜನ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು ಮತ್ತು ಪ್ರತಿಭಟನೆಗಳು ನಡೆದಿದ್ದವು. ಇದೀಗ ಮೂರು ತಿಂಗಳು ಕಳೆಯುವುದರೊಳಗೆ ಮತ್ತೊಂದು ಇಂತಹ ಘಟನೆ ನಡೆದಿರುವುದು ಅಮೆರಿಕದಲ್ಲಿ ಆಕ್ರೋಶದ ಅಲೆಯನ್ನು ಎಬ್ಬಿಸಿದೆ.

- Advertisement -

ತಮ್ಮ 29 ವರ್ಷದ ಮಗ (ಜಾಕೊಬ್ ಬ್ಲೇಕ್) ಸೊಂಟದ ಕೆಳಗೆ ಬಲಕಳೆದುಕೊಂಡಿದ್ದಾನೆ. ಇದು ಶಾಶ್ವತವಾಗಿರಲಿದೆಯೇ ಗೊತ್ತಿಲ್ಲ ಎಂದು ಬ್ಲೇಕ್ ನ ತಂದೆ ಹೇಳಿದ್ದಾರೆ. ಜಾಕೊಬ್ ತನ್ನ ತಂದೆಯ ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ತಂದೆಯೊಂದಿಗೆ ಉತ್ತರ ಕೊರೊಲಿನಾಗೆ ಪ್ರಯಾಣಿಸುವ ವೇಳೆ ಈ ಘಟನೆ ನಡೆದಿದೆ. ತಮ್ಮ ಮಗನಿಗೆ ಪೊಲೀಸರು ಹಿಂದಿನಿಂದ ಗುಂಡಿನ ದಾಳಿ ಮಾಡಿದ್ದಾರೆ. ಎಂಟು ಬಾರಿ ಹೊಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಗುಂಡಿನ ದಾಳಿಯ ವೇಳೆ ಬ್ಲೇಕ್ ನ ಮೂರು, ಐದು, ಎಂಟು ವರ್ಷಗಳ ಮಕ್ಕಳು ಕಾರಿನಲ್ಲೇ ಇದ್ದರು. ಅವರ ಸಮ್ಮುಖದಲ್ಲೇ ಗುಂಡಿನ ದಾಳಿ ನಡೆದಿದೆ ಎಂದು ಬ್ಲೇಕ್ ಕುಟುಂಬದ ನ್ಯಾಯವಾದಿ ಬೆನ್ ಕ್ರಂಪ್ ತಿಳಿಸಿದ್ದಾರೆ.

ಘಟನೆಯ ಬಳಿಕ ಕೆನೊಶ ಮತ್ತು ಇತರ ಪ್ರಮುಖ ನಗರಗಳ ಬೀದಿಗಳಲ್ಲಿ ಜನರು ಹಿಂಸಾತ್ಮಕ ಪ್ರತಿಭಟನೆಗಿಳಿದಿದ್ದಾರೆ. ಹೀಗಾಗಿ ಸೋಮವಾರ ಸಂಜೆ ಕರ್ಫ್ಯೂ ಜಾರಿಗೊಳಿಸಲಾಗಿದೆ.

Join Whatsapp