ಹೊಸದಿಲ್ಲಿ : ಅಮಿತ್ ಷಾ ಅವರ ಖಾತೆಯನ್ನು ನಿರ್ಬಂಧಿಸಿದ್ದಕ್ಕಾಗಿ ಟ್ವಿಟರ್ ಪ್ರತಿನಿಧಿಯ ವಿರುದ್ಧ ಸಂಸದೀಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಕಳೆದ ನವೆಂಬರ್‌ನಲ್ಲಿ ಗೃಹ ಸಚಿವ ಅಮಿತ್ ಷಾ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು, ಸುದ್ದಿ ಮಾಧ್ಯಮ ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ತಡೆಯುವುದು ಮತ್ತು ಡಿಜಿಟಲ್ ತಾಣದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವ ವಿಷಯಗಳನ್ನು ಪರಿಗಣಿಸಲು ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಸಭೆ ಸೇರಿತ್ತು.
ಸಂಸದ ಶಶಿ ತರೂರ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯು ಟ್ವಿಟ್ಟರ್ ಮತ್ತು ಫೇಸ್‌ಬುಕ್ ಪ್ರತಿನಿಧಿಗಳನ್ನು ಕರೆಸಿಕೊಂಡಿತ್ತು. ಸಮಿತಿಯಲ್ಲಿ ಚರ್ಚೆಯಾದ ಪ್ರಮುಖ ವಿಷಯ ಅಮಿತ್ ಷಾ ಅವರ ಟ್ವಿಟ್ಟರ್ ಖಾತೆಯನ್ನು ನಿರ್ಬಂಧಿಸಿರುವುದಾಗಿತ್ತು. ಅಮಿತ್ ಶಾ ಅವರ ಟ್ವಿಟ್ಟರ್ ಖಾತೆಯನ್ನು ಏಕೆ ನಿರ್ಬಂಧಿಸಲಾಗಿದೆ ಮತ್ತು ಅದಕ್ಕೆ ಹಕ್ಕು ನೀಡಿದವರು ಯಾರು? ಎಂದು ಸಮಿತಿಯ ಬಿಜೆಪಿ ಪ್ರತಿನಿಧಿಗಳು ಟ್ವಿಟರ್ ಪ್ರತಿನಿಧಿಯ ಬಳಿ ಕೇಳಿದ್ದಾರೆ. ಪೋಸ್ಟ್ ಮಾಡಿದ ಚಿತ್ರಕ್ಕೆ ಸಂಬಂಧಿಸಿದ ಹಕ್ಕುಸ್ವಾಮ್ಯ ಸಮಸ್ಯೆಯಿಂದಾಗಿ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬೇಕಾಯಿತು ಎಂದು ಟ್ವಿಟರ್ ಅಧಿಕಾರಿಗಳು ವಿವರಿಸಿದ್ದಾರೆ.