ಉತ್ತರ ಪ್ರದೇಶ ಸರ್ಕಾರದಿಂದ ನಿರಂತರ ಕಿರುಕುಳಕ್ಕೆ ಒಳಗಾಗಿರುವ ಗೋರಖ್ ಪುರ ಮೂಲದ ಡಾ.ಕಫೀಲ್ ಖಾನ್ ಅವರ ಹೆಸರನ್ನು ಕ್ರಿಮಿನಲ್ ಇತಿಹಾಸ ಹೊಂದಿರುವ 80 ಮಂದಿ ರೌಡಿ ಶೀಟರ್ ಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಸೇರಿಸಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ, ನಂತರ ಬಿಡುಗಡೆಯಾಗಿರುವ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ಡಾ. ಕಫೀಲ್ ಖಾನ್ ಸೇರಿದಂತೆ 80 ಮಂದಿಯ ಮೇಲೆ ನಿಗಾ ಇಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
2017 ರಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಹಲವು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮೇಲೆ ಡಾ.ಕಫೀಲ್ ಖಾನ್ ಅವರನ್ನು ಗೋರಖ್‌ಪುರದ ಬಿಆರ್‌ಡಿ ವೈದ್ಯಕೀಯ ಕಾಲೇಜಿನಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಖಾನ್ ಬಹಿರಂಗಗೊಳಿಸಿದ ಉತ್ತರ ಪ್ರದೇಶ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಗೆ ಇಡೀ ದೇಶ ಬೆಚ್ಚಿ ಬಿದ್ದಿತ್ತು.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜೋಗೇಂದ್ರ ಕುಮಾರ್ ಅವರ ಸೂಚನೆಯ ಮೇರೆಗೆ ಗೋರಖ್ ಪುರ ಪೊಲೀಸರು 81 ಜನರ ವಿರುದ್ಧ ಅಪರಾಧ ಹಿನ್ನೆಲೆಯವರ ಪಟ್ಟಿ ತಯಾರಿಸಿದ್ದಾರೆ. ಗೋರಖ್ ಪುರದಲ್ಲಿ ಈಗ ಒಟ್ಟು 1,543 ಅಪರಾಧ ಹಿನ್ನೆಲೆಯವರು ಅಥವಾ ಕ್ರಿಮಿನಲ್ ದಾಖಲೆ ಹೊಂದಿರುವ ವ್ಯಕ್ತಿಗಳು ಇದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2020ರ ಜೂನ್ 18 ರಂದು ಅಪರಾಧ ಹಿನ್ನೆಲೆಯವರ ಪಟ್ಟಿ ತೆರೆಯಲಾಗಿದೆ ಎಂದು ಕಫೀಲ್ ಖಾನ್ ಅವರ ಸಹೋದರ ಆದಿಲ್ ಖಾನ್ ತಿಳಿಸಿದ್ದಾರೆ, ಆದರೆ ಮಾಹಿತಿಯನ್ನು ಶುಕ್ರವಾರ ಮಾಧ್ಯಮಗಳಿಗೆ ನೀಡಲಾಗಿದೆ.
ಶನಿವಾರ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ಕಫೀಲ್ ಖಾನ್, ‘ಉತ್ತರ ಪ್ರದೇಶ ಸರ್ಕಾರ ತಮ್ಮನ್ನು ದೀರ್ಘ ಕಾಲದ ಅಪರಾಧ ಹಿನ್ನೆಲೆಯುಳ್ಳವರ ಪಟ್ಟಿಗೆ ಸೇರಿಸಿದೆ. ಜೀವಮಾನ ಪೂರ್ತಿ ಪೊಲೀಸರು ತಮ್ಮ ಮೇಲೆ ನಿಗಾ ಇಟ್ಟಿರುತ್ತಾರೆ. ಇದೊಂದು ರೀತಿ ಒಳ್ಳೆಯದು. ನನ್ನ ಜತೆಗೆ ಇಬ್ಬರು ಭದ್ರತಾ ಸಿಬ್ಬಂದಿ ನಿಯೋಜಿಸಿದರೆ, ಅವರು ನನ್ನ ಮೇಲೆ 24 ಗಂಟೆಗಳ ಕಾಲ ಕಣ್ಣಿಟ್ಟಿರುತ್ತಾರೆ. ಕನಿಷ್ಠ, ನಕಲಿ ಪ್ರಕರಣಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ‘ ಎಂದು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ -ಸಿಎಎ ವಿರುದ್ಧ ಕಫೀಲ್ ಖಾನ್ 2019ರ ಡಿಸೆಂಬರ್ 10ರಂದು ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಿದ್ದರು. ಇದಾದ ನಂತರ ಅವರನ್ನು ಜನವರಿ 2020 ಬಂಧಿಸಲಾಯಿತ್ತು. ನಂತರ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1, 2020 ರಂದು, ಅಲಹಾಬಾದ್ ಹೈಕೋರ್ಟ್ ಖಾನ್ ಅವರ ಬಂಧನವನ್ನು ರದ್ದುಪಡಿಸಿತ್ತು.
“ಅಪರಾಧ ಹಿನ್ನೆಲೆ ವ್ಯಕ್ತಿಗಳ ಪಟ್ಟಿ”ಯಲ್ಲಿ ನವಜಾತ ಶಿಶು ರಕ್ಷಕ ಡಾ.ಕಫೀಲ್ ಖಾನ್ ಹೆಸರು !
Prasthutha|