ಹೈದರಾಬಾದ್ | ಮಳೆಗೆ 31 ಬಲಿ | ಮನ ಕರಗಿಸಿತು ಕಾರಿನೊಂದಿಗೆ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿಯ ಕೊನೆಯ ಕರೆ

Prasthutha|

ಹೈದರಾಬಾದ್ : ಒಂದು ವಾರದಿಂದ ಸುರಿದ ಭಾರಿ ಮಳೆಗೆ ಹೈದರಾಬಾದ್ ನಗರ ರಸ್ತೆಗಳು, ಕಟ್ಟಡಗಳು ದಟ್ಟ ನೀರಿನಿಂದ ಆವರಿಸಿ ಸಾಕಷ್ಟು ಕಷ್ಟ-ನಷ್ಟಗಳುಂಟಾಗಿವೆ. ನಗರದಲ್ಲೇ ಈ ಭೀಕರ ಮಳೆಗೆ 31 ಮಂದಿ ಬಲಿಯಾಗಿದ್ದು, ತೆಲಂಗಾಣದಲ್ಲಿ 50ಕ್ಕೂ ಅಧಿಕ ಮಂದಿ ಸಾವಿಗಿಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಡುವೆ, ಮಳೆ ನೀರಿನ ಅಲೆಗೆ ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನಿಗೆ ಮಾಡಿದ್ದ ಕೊನೆಯ ಫೋನ್ ಕರೆ ಸಂಭಾಷಣೆ ಈಗ ಎಲ್ಲರ ಮನ ಕರಗುವಂತೆ ಮಾಡಿದೆ.

- Advertisement -

ನೀರಿನ ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದ ತನ್ನ ಕಾರಿನಲ್ಲಿ ಸಿಲುಕಿದ್ದ ವೆಂಕಟೇಶ್ ಗೌಡ ಎಂಬವರು, ರಕ್ಷಣೆಗಾಗಿ ಸ್ನೇಹಿತನಿಗೆ ಕರೆ ಮಾಡಿದ್ದರು. ಯಾರನ್ನಾದರೂ ಸಹಾಯಕ್ಕೆ ಕರೆಯುವಂತೆ ಅವರು ಕೋರಿಕೊಂಡಿದ್ದರು. ಆದರೆ, ಇಂತಹ ಸನ್ನಿವೇಶದಲ್ಲಿ ಅವರನ್ನು ಉಳಿಸಿಕೊಳ್ಳಲು ಸ್ನೇಹಿತನಿಂದ ಸಾಧ್ಯವಾಗಿಲ್ಲ. ಏನೂ ಮಾಡಲಾಗದ ಸ್ಥಿತಿಯಲ್ಲಿ ಕಾರು ಕೊಚ್ಚಿಕೊಂಡು ಹೋಗುತ್ತಿರುವುದನ್ನು ಅವರು ನೋಡುತ್ತಿರುತ್ತಾರೆ. ವೆಂಕಟೇಶ್ ಮೃತದೇಹ ಗುರುವಾರ ಪತ್ತೆಯಾಗಿದೆ.

ಕಾರು ನೀರಿನ ಅಲೆಯಲ್ಲಿ ಕೊಚ್ಚಿಹೋಗಿ ಮರವೊಂದಕ್ಕೆ ಸಿಲುಕಿಕೊಂಡಿತ್ತು. ಈ ವೇಳೆ ವೆಂಕಟೇಶ್ ಸ್ನೇಹಿತನಿಗೆ ಕರೆ ಮಾಡಿದ್ದರು. “ಕಾರಿನ ಟಯರ್ ಗಳು ಮೇಲೆದ್ದಿವೆ. ಕಾರಿನೊಳಗೆ ನೀರು ತುಂಬಿಕೊಂಡಿದೆ’’ ಎಂದು ವೆಂಕಟೇಶ್ ಹೇಳುತ್ತಾರೆ. ಅವರ ಮಾತುಗಳನ್ನು ಕೇಳಿ ಆತಂಕಿತರಾದ ಅವರ ಸ್ನೇಹಿತ, ಆವರಣ ಗೋಡೆ ಹತ್ತು ಅಥವಾ ಅಲ್ಲೇ ಇರುವ ಮರ ಹತ್ತು ಎಂದು ಸಲಹೆ ನೀಡುತ್ತಾರೆ.
“ಹೌದು, ಇಲ್ಲೊಂದು ಗೋಡೆ ಇದೆ, ಆದರೆ ನಾನು ಕಾರಿನಿಂದ ಹೊರಬಂದರೆ, ನೀರಿನಲ್ಲಿ ಕೊಚ್ಚಿ ಹೋಗುತ್ತೇನೆ. ಕಾರು ಸಿಲುಕಿಕೊಂಡಿದ್ದ ಮರ ಕೂಡ ಈಗ ಹೋಯಿತು. ಕಾರು ಕೂಡ ಕೊಚ್ಚಿಕೊಂಡು ಹೋಗುತ್ತಿದೆ’’ ಎಂದು ವೆಂಕಟೇಶ್ ಹೇಳುತ್ತಾರೆ. “ಧೈರ್ಯದಿಂದಿರು, ನಿನಗೆ ಏನೂ ಆಗುವುದಿಲ್ಲ’’ ಎಂದು ಸ್ನೇಹಿತ ಹೇಳುತ್ತಾರೆ. ಆದರೆ, ಕೊನೆಗೂ ವೆಂಕಟೇಶ್ ಬದುಕುಳಿಯುವುದು ಸಾಧ್ಯವಾಗುವುದಿಲ್ಲ. ಒಂದು ನಿಮಿಷ 44 ಸೆಕೆಂಡ್ ಅವಧಿಯ ಈ ಫೋನ್ ಕರೆ ರೆಕಾರ್ಡ್ ಎಂತಹವರ ಮನಕರಗುವಂತಿದೆ.

- Advertisement -

ಹೈದರಾಬಾದ್ ನಲ್ಲಿ ಸುರಿದ ಧಾರಾಕಾರ ಮಳೆಗೆ ಸುಮಾರು 31 ಮಂದಿ ಸಾವಿಗೀಡಾಗಿದ್ದಾರೆ. ತೆಲಂಗಾಣದಲ್ಲಿ ಕನಿಷ್ಠ 50 ಮಂದಿ ಸಾವಿಗೀಡಾಗಿದ್ದಾರೆ. ಬರ್ಕಾಸ್ ಮತ್ತು ಫಲಕ್ ನುಮಾದಲ್ಲಿ ಇಬ್ಬರು ವ್ಯಕ್ತಿಗಳು ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಭಯಾನಕ ವೀಡಿಯೊ ವೈರಲ್ ಆಗಿತ್ತು. ಮಳೆ ಸಂಬಂಧಿ ನಾನಾ ಅನಾಹುತಗಳು ತೆಲಂಗಾಣದಲ್ಲಿ ವರದಿಯಾಗಿವೆ.

Join Whatsapp