ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ, ಸಮಾಜವಾದ ಪದ ರದ್ದತಿಗೆ ಸುಪ್ರೀಂ ಕೋರ್ಟ್ ನಲ್ಲಿ ಮನವಿ

Prasthutha|

ನವದೆಹಲಿ : ಭಾರತದ ಸಂವಿಧಾನದಲ್ಲಿರುವ ಮಹತ್ವದ ಅಂಶಗಳ ಮೇಲೆ ಮತ್ತೊಮ್ಮೆ ಜಾತಿವಾದಿ, ಕೋಮುವಾದಿ ಶಕ್ತಿಗಳ ಕಣ್ಣು ಬಿದ್ದಿದ್ದು, ಸಂವಿಧಾನದ ಪೀಠಿಕೆಯಲ್ಲಿರುವ “ಜಾತ್ಯತೀತ” ಮತ್ತು “ಸಮಾಜವಾದ” ಪದಗಳನ್ನೇ ತೆಗೆಯಬೇಕೆಂಬ ಬೇಡಿಕೆ ಕೇಳಿಬಂದಿದೆ. ಸಂವಿಧಾನದ ಪೀಠಿಕೆಯಲ್ಲಿ 42ನೇ ತಿದ್ದುಪಡಿ ಮೂಲಕ ಸೇರ್ಪಡೆಗೊಳಿಸಲಾದ “ಜಾತ್ಯತೀತ” ಮತ್ತು “ಸಮಾಜವಾದ” ಪದಗಳನ್ನು ತೆಗೆಯುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. 1976ರಲ್ಲಿ ನಡೆದ ತಿದ್ದುಪಡಿಯು ಸಂವಿಧಾನದ ತತ್ವಗಳು ಹಾಗೂ ಭಾರತದ ಸಾಂಸ್ಕೃತಿಕ ಮತ್ತು ಐತಿಹಾಸಿಕ ವಿಚಾರಗಳಿಗೆ ವಿರೋಧಾಭಾಸವಾದುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

- Advertisement -

ಸಂವಿಧಾನದ ಪರಿಚ್ಚೇದ 19(1)(ಎ) ಅನುಸಾರ ದೃಢಪಡಿಸಲಾದ ಮಾತನಾಡುವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಉಲ್ಲಂಘಿಸುವುದರಿಂದ ಮತ್ತು ಸಂವಿಧಾನದ ಪರಿಚ್ಛೇದ 25ರನ್ವಯ ದೃಢಪಡಿಸಲಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಉಲ್ಲಂಘಿಸುವುದರಿಂದ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

“ಭಾರತದ ಶ್ರೇಷ್ಠ ಗಣರಾಜ್ಯ ಎಂಬುದು ಜಗತ್ತಿನ ಅತ್ಯಂತ ಹಳೆಯದಾದ ನಾಗರಿಕತೆಯಾಗಿದ್ದು, ಅದು ಸಾಮಾನ್ಯ ಧರ್ಮದ ಪರಿಕಲ್ಪನೆಯಿಂದ ಭಿನ್ನವಾದ ಸ್ಪಷ್ಟವಾದ “ಧರ್ಮ”ದ ಪರಿಕಲ್ಪನೆಯನ್ನು ಹೊಂದಿದೆ. ಕಮ್ಯುನಿಸ್ಟ್ ಸಿದ್ಧಾಂತದ ರಾಜ್ಯದ ಪರಿಕಲ್ಪನೆಯನ್ನು, ಭಾರತದ ಸಾಮಾಜಿಕ-ಆರ್ಥಿಕ ವ್ಯವಸ್ಥೆ ಮತ್ತು ಧಾರ್ಮಿಕ ಭಾವನೆಗಳೊಂದಿಗೆ ಹೊಂದಿಸಿ, ಭಾರತೀಯ ನೆಲೆಯಲ್ಲಿ ಅನ್ವಯಿಸಕೂಡದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಪ್ರವೇಶ್ ಕುಮಾರ್ ಮತ್ತು ನ್ಯಾಯವಾದಿಗಳಾದ ಬಲರಾಮ್ ಸಿಂಗ್ ಮತ್ತು ಕುಮಾರ್ ಶುಕ್ಲಾ ಎಂಬವರು ಈ ಅರ್ಜಿ ದಾಖಲಿಸಿದ್ದಾರೆ. ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಎಂಬವರ ಮುಖೇನ ಅರ್ಜಿ ಸಲ್ಲಿಸಲಾಗಿದೆ.

Join Whatsapp