ಮಂಗಳೂರು ಮಹಾನಗರ ಪಾಲಿಕೆ ಒಳಚರಂಡಿ ವಿಭಾಗದ ಕಾರ್ಮಿಕರ ಗೋಳು ಕೇಳುವವರೇ ಇಲ್ಲ : ಜಗದೀಶ್ ಪಾಂಡೇಶ್ವರ್

Prasthutha: October 20, 2020

ಮಂಗಳೂರು : ಕಳೆದ 15 ವರ್ಷಗಳಿಂದ ಪದೇಪದೇ ಮನವಿ ಮಾಡುತ್ತಿದ್ದರೂ, ಮಂಗಳೂರು ಮಹಾನಗರ ಪಾಲಿಕೆಯ ಒಳಚರಂಡಿ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರ ಗೋಳು ಕೇಳುವವರೇ ಇಲ್ಲ. ಒಳಚರಂಡಿ ವಿಭಾಗದ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡಿರುವುದರಿಂದ ಕಾರ್ಮಿಕರಿಗೆ ಉತ್ತಮ ವೇತನ, ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಈ ಗುತ್ತಿಗೆಯನ್ನು ರದ್ದುಪಡಿಸಿ, ಮಹಾನಗರ ಪಾಲಿಕೆಯೇ ಕಾರ್ಮಿಕರ ಹಿತವನ್ನು ಕಾಪಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ್ ‘ಪ್ರಸ್ತುತ’ ಜೊತೆ ಮಾತನಾಡುತ್ತಾ ತಿಳಿಸಿದರು.

ಈ ಸಂಬಂಧ ಸೋಮವಾರ ತಮ್ಮ ಸಂಘಟನೆಯು ಮಹಾನಗರ ಪಾಲಿಕೆ ಮುಂದೆ ಕಾರ್ಮಿಕರ ಜೊತೆಗೂಡಿ ಪ್ರತಿಭಟನೆ ನಡೆಸಿದೆ. ಇನ್ನಾದರೂ ಎಚ್ಚೆತ್ತು ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.

ಒಂದೆಡೆ ಗುತ್ತಿಗೆದಾರರು ಕಡಿಮೆ ವೇತನ ನೀಡಿ ಕಾರ್ಮಿಕರನ್ನು ಶೋಷಿಸುತ್ತಿದ್ದು, ಇನ್ನೊಂದಡೆ ಅವರಿಗೆ ಯಾವುದೇ ಮೂಲಭೂತ ಸೌಲಭ್ಯಗಳೂ ಸಿಗುತ್ತಿಲ್ಲ. ಅತ್ಯಂತ ಕಡಿಮೆ ವೇತನದಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಇದರಿಂದ ಅವರು ತಮ್ಮ ಜೀವನ ಸಾಗಿಸುವುದೇ ಕಷ್ಟವಾಗಿದೆ. ಇನ್ನು ಮಕ್ಕಳ ಶಿಕ್ಷಣ, ಉತ್ತಮ ಗುಣಮಟ್ಟದ ಆರೋಗ್ಯ ಸವಲತ್ತು, ಪೌಷ್ಠಿಕಾಂಶ ಭರಿತ ಆಹಾರ ಸೇವಿಸುವುದು ಅಸಾಧ್ಯವಾಗಿದೆ. ಹೀಗಾಗಿ ಒಳಚರಂಡಿ ವಿಭಾಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ವೇತನ ಹೆಚ್ಚಳ, ಆರೋಗ್ಯ ತಪಾಸಣೆ, ಪಿಎಫ್, ವಿಶ್ರಾಂತಿ ಕೊಠಡಿ, ಇಎಲ್ ಮುಂತಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಕಳೆದ 15 ವರ್ಷಗಳಲ್ಲಿ ಮಹಾನಗರ ಪಾಲಿಕೆಯಲ್ಲಿ ಆಡಳಿತ ಬದಲಾಗುತ್ತಾ ಬಂದಿದೆ. ಆದರೆ, ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಯಾರೊಬ್ಬರೂ ಆಸಕ್ತಿ ತೋರಿಸುತ್ತಿಲ್ಲ. ಮಹಾನಗರ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಕೊಡುತ್ತಲೇ ಬಂದಿದ್ದೇವೆ. ಆದರೆ, ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ಮಹಾನಗರ ಪಾಲಿಕೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜಗದೀಶ್ ಆರೋಪಿಸಿದರು.

ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ :
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾಲಿಕೆ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು. ಒಳಚರಂಡಿ ಕಾರ್ಮಿಕರಿಗೆ ಸೂಕ್ತ ಸವಲತ್ತುಗಳನ್ನು ಒದಗಿಸುವುದರೊಂದಿಗೆ, ಕಾರ್ಮಿಕರ ವೇತನ ಹೆಚ್ಚಳ ಮಾಡುವಂತೆ ಗುತ್ತಿಗೆದಾರರಿಗೆ ನಿರ್ದೇಶಿಸುವಂತೆ ಅಥವಾ ಗುತ್ತಿಗೆ ರದ್ದು ಮಾಡಿ, ಮಹಾನಗರ ಪಾಲಿಕೆಯೇ ಜವಾಬ್ದಾರಿ ತೆಗೆದುಕೊಂಡು ಕಾರ್ಮಿಕರ ವೇತನ ಹೆಚ್ಚಳ ಮಾಡುವಂತೆ ಪ್ರತಿಭಟನಕಾರರು ಒತ್ತಾಯಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಜಗದೀಶ್ ಪಾಂಡೇಶ್ವರ್ ಮಾತನಾಡಿದರು.

ಜಿಲ್ಲಾ ಸಂಘಟನಾ ಸಂಚಾಲಕರಾದ ನಾಗೇಶ್ ಮುಲ್ಲಕಾಡು, ಮಂಗಳೂರು ತಾಲೂಕು ಸಂಘಟನಾ ಸಂಚಾಲಕ ಸಂಜೀವ ಪೆರ್ಮಂಕಿ ಉಳಾಯಿಬೆಟ್ಟು, ವೆಂಕಟೇಶ್ ಮೀನಕಳಿಯ, ರಾಮು ಮೂಡುಶೆಡ್ಡೆ, ನಾಗರಾಜ್ ವಾಮಂಜೂರು, ರಾಜು ಕೆ., ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ನಾಮ ನಿರ್ದೇಶನ ಸದಸ್ಯರಾದ ಪ್ರೇಮ್ ಕುಮಾರ್ ಬಳ್ಳಾಲ್ ಬಾಗ್, ಕಾರ್ಮಿಕ ವಿಭಾಗದ ಮುಖ್ಯಸ್ಥರಾದ ಪದ್ಮನಾಭ ವಾಮಂಜೂರು, ಕೇಶವ ಪಚ್ಚನಾಡಿ, ರವೀಂದ್ರ ಕಟೀಲ್, ರಾಜೇಶ್ ಪೆರ್ನಾಜೆ, ಜಯಂತ್, ಸಂತೋಷ್, ಅನ್ವಿತ್, ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!