ನಿಗೂಢ ಚಾರ್ಜ್ ಶೀಟ್ FIR 59/2020

Prasthutha|

– ಸಿದ್ದೀಕ್ ಕೆ.

- Advertisement -

ಗಲಭೆಗೆ ಬಹಿರಂಗ ಆಹ್ವಾನ ನೀಡಿದ ಸಂಸದ ಮತ್ತು ಸಂಘಪರಿವಾರ ನಾಯಕರ ಆಹ್ವಾನಗಳು ಇಂದಿಗೂ ಸಾರ್ವಜನಿಕವಾಗಿ ಲಭ್ಯವಿದ್ದರೂ ಅವರ ವಿರುದ್ಧ ಎಫ್‌ ಐ ಆರ್ ದಾಖಲಿಸಲು ಪೊಲೀಸರು ಮುಂದಾಗಲಿಲ್ಲ. ಮಾತ್ರವಲ್ಲ, ಮಧ್ಯಪ್ರವೇಶಿಸಬೇಕಾದ ನ್ಯಾಯಪೀಠವು ಗಲಭೆಯ ರೂವಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸಮಯವಿಲ್ಲವೆಂದು ಹೇಳುತ್ತಿರುವಾಗ ದಿಲ್ಲಿ ಪೊಲೀಸ್  ಮಾತ್ರವಲ್ಲ, ನ್ಯಾಯಾಲಯವೂ ಕೇಂದ್ರ ಗೃಹ ಸಚಿವಾಲಯದಿಂದ ನಿಯಂತ್ರಿಸಲ್ಪಡುತ್ತಿದೆ ಎಂಬ ಸಂಶಯ ಬಲವಾಗುತ್ತಿದೆ.

ಈಶಾನ್ಯ ದಿಲ್ಲಿ ಹೊತ್ತಿ ಉರಿಯುವಾಗ ಗಾಯಗೊಂಡು ಜೀವನ್ಮರಣ ಹೋರಾಟದ ವೇಳೆ ಚಿಕಿತ್ಸೆಗಾಗಿ ಬಂದವರಿಗೆ ಕ್ಲಿನಿಕ್‌ ನಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಂದ ಹಿಡಿದು ಪೌರತ್ವ ಕಾನೂನಿನ ವಿರುದ್ಧ ನಿಂತ ದೇಶದ ಪ್ರಮುಖ ಹೋರಾಟಗಾರರ ವರೆಗೆ, ಯಾರನ್ನೂ ಬಿಡದೆ ಅವರೆಲ್ಲರನ್ನೂ ಗಲಭೆಕೋರರೆಂದು ತೀರ್ಮಾನಿಸುವ ಆತುರದಲ್ಲಿ ದಿಲ್ಲಿ ಪೊಲೀಸ್ ತನ್ನ ಪಾತ್ರವನ್ನು ಬಹಿರಂಗಪಡಿಸುತ್ತಿದೆ!

- Advertisement -

ದೇಶದಲ್ಲಿ ಇದು ವರೆಗೆ ನಡೆದ ಮುಸ್ಲಿಮ್ ವಿರೋಧಿ ಗಲಭೆಗಳಲ್ಲೆಲ್ಲಾ ದೇಶದ ಕಾನೂನು ಪಾಲಕರು ದಾಳಿಕೋರರ ಜೊತೆ ಸೇರಿಕೊಂಡಿದ್ದರು ಎಂಬ ವಿಚಾರವನ್ನು ಪ್ರತಿಯೊಂದು ಗಲಭೆಯ ನಂತರವೂ ಹೊರಬರುವ ಸತ್ಯಶೋಧನಾ ವರದಿಗಳು, ಆಯೋಗದ ವರದಿಗಳು ವ್ಯಕ್ತಪಡಿಸುತ್ತಿದೆ. ಹಿಂದೆಂದಿಗಿಂತ ಭಿನ್ನವಾಗಿ ಕಾನೂನು ಪಾಲಕರ ಜೊತೆಗೆ ದೇಶದ ನ್ಯಾಯಪೀಠಗಳ ಮೇಲೆಯೂ ಸಂಶಯದ ಕರಿನೆರಳು ಇರುವುದು ಈಶಾನ್ಯ ದಿಲ್ಲಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಮುಸ್ಲಿಮ್ ವಿರೋಧಿ ಗಲಭೆಗಳಿಗೆ ಸಂಬಂಧಿಸಿದ ನ್ಯಾಯಾಲಯದ ಕೆಲವು ಆದೇಶಗಳಲ್ಲಿ ಸ್ಪಷ್ಟವಾಗುತ್ತದೆ.

 ಗಲಭೆಗೆ ಬಹಿರಂಗ ಆಹ್ವಾನ ನೀಡಿದ ಸಂಸದ ಮತ್ತು ಸಂಘಪರಿವಾರ ನಾಯಕರ ಆಹ್ವಾನಗಳು ಇಂದಿಗೂ ಸಾರ್ವಜನಿಕವಾಗಿ ಲಭ್ಯವಿದ್ದರೂ ಅವರ ವಿರುದ್ಧ ಎಫ್‌ ಐ ಆರ್ ದಾಖಲಿಸಲು ಪೊಲೀಸರು ಮುಂದಾಗಲಿಲ್ಲ. ಮಾತ್ರವಲ್ಲ, ಮಧ್ಯಪ್ರವೇಶಿಸಬೇಕಾದ ನ್ಯಾಯಪೀಠವು ಗಲಭೆಯ ರೂವಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸಮಯವಿಲ್ಲವೆಂದು ಹೇಳುತ್ತಿರುವಾಗ ದಿಲ್ಲಿ ಪೊಲೀಸ್ ಮಾತ್ರವಲ್ಲ, ನ್ಯಾಯಾಲಯವೂ ಕೇಂದ್ರ ಗೃಹ ಸಚಿವಾಲಯದಿಂದ ನಿಯಂತ್ರಿಸಲ್ಪಡುತ್ತಿದೆ ಎಂಬ ಸಂಶಯ ಬಲವಾಗುತ್ತಿದೆ.

 ನ್ಯಾಯಾಲಯಗಳಲ್ಲೇನು ನಡೆಯುತ್ತಿದೆ?

ಇತ್ತೀಚೆಗೆ ದೇಶದ ಪರಮೋನ್ನತ ನ್ಯಾಯಾಲಯಗಳ ತೀರ್ಪುಗಳಲ್ಲಿ ಹೆಚ್ಚಿನವು ಆಡಳಿತ ವರ್ಗವನ್ನು ಬೆಂಬಲಿಸುವ ತೀರ್ಪುಗಳಾಗಿ ಕಂಡು ಬರುತ್ತಿವೆ. ಆದ್ದರಿಂದಲೇ ನ್ಯಾಯಾಂಗದ ಸ್ವಾತಂತ್ರ ಎಂಬುದು ಕೇವಲ ಅಲಂಕಾರಿಕ ಪದ ಪ್ರಯೋಗವಾಗಿ ಮಾರ್ಪಟ್ಟಿದೆ. ದಿಲ್ಲಿ ಗಲಭೆಯ ರೂವಾರಿಗಳು ಯಾರೆಂದು ದೇಶದ ಜನರಿಗೆ ಸ್ಪಷ್ಟವಾಗಿದ್ದರೂ, ಕಪಿಲ್ ಮಿಶ್ರಾ ಮತ್ತಿತರ ಅಪರಾಧಿಗಳು ಶಿಕ್ಷೆಗೊಳಗಾಗುವುದಿಲ್ಲ ಮತ್ತು ಅವರ ವಿರುದ್ಧ ಎಫ್‌ಐಆರ್ ಸಹ ದಾಖಲಿಸಲಿಲ್ಲ ಎಂದು ದಿಲ್ಲಿ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ವಿದ್ಯಾರ್ಥಿ ಹೋರಾಟಗಾರರ ಪರವಾಗಿ ವಾದ ಮಂಡಿಸಿದ ವಕೀಲ ಅಕ್ರಮ್ ಖಾನ್ ಹೇಳುತ್ತಾರೆ.

ಗಲಭೆ ನಡೆದು ಹತ್ತು ದಿವಸಗಳ ನಂತರ ದಿಲ್ಲಿ ಪೊಲೀಸ್ ಕ್ರೈಂ ಬ್ರಾಂಚ್ ನಾರ್ಕೊಟಿಕ್ ಸೆಲ್ ಎಸ್.ಐ. ಅರವಿಂದ್ ಕುಮಾರ್ ಈ ಪ್ರಕರಣದ ಕುರಿತು ದಾಖಲಿಸಿದ 59/2020 ಎಂಬ ಎಫ್‌ ಐಆರ್ ಪಿತೂರಿಯಿಂದ ಕೂಡಿದೆ ಎಂದು ವಕೀಲ ಶರ್ಜಿಲ್ ಹೇಳುತ್ತಾರೆ. ಈ ಎಫ್‌ಐಆರ್, ದಿಲ್ಲಿ ಗಲಭೆಯ ಹೊಣೆಯನ್ನು ಸಿಎಎ ವಿರೋಧಿ ಹೋರಾಟಗಾರರ ಮೇಲೆ ಹೊರಿಸುವ ಪಿತೂರಿಯಂತಿದೆ. ಇನ್ನಷ್ಟು ವಿದ್ಯಾರ್ಥಿಗಳನ್ನು ಮತ್ತು ಹೋರಾಟಗಾರರನ್ನು ಯುಎಪಿಎ ಹೇರಿ ಬಂಧಿಸಲು ಈ ಎಫ್‌ಐಆರ್ ಅನ್ನು ಬಳಸಿಕೊಳ್ಳಲಾಗುತ್ತಿದ್ದು, ಇಲ್ಲಿಯ ವರೆಗೆ 14 ಬಂಧನಗಳು ನಡೆದಿವೆ. ಈ ಮೂಲಕ ಆಡಳಿತ ವರ್ಗವನ್ನು ಟೀಕಿಸುವ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಹೋರಾಟಗಾರರ ಮೇಲೆ ಕರಾಳ ಕಾನೂನು ದಾಖಲಿಸಿ ಅವರನ್ನು ಭಯೋತ್ಪಾದಕರಾಗಿ ಬಿಂಬಿಸುವುದೇ ಅವರ ಗುರಿ ಎಂದು ಆತ ಹೇಳುತ್ತಾರೆ.

ಎಫ್‌ ಐಆರ್ ಪ್ರಕಾರ ಓರ್ವನನ್ನು ಬಂಧಿಸಿದರೆ ಅದರ ಪ್ರತಿಯನ್ನು ಹೊಂದುವುದು ಆತನ ಹಕ್ಕಾಗಿರುತ್ತದೆ. ಈ ವಿವಾದಿತ ಎಫ್‌ ಐಆರ್ ಅತ್ಯಂತ ನಿಗೂಢವಾಗಿದೆ. ಪೊಲೀಸರಿಗೆ ಬೇಕಾದಂತೆ ಯಾವಾಗ ಬೇಕಾದರೂ ಏನನ್ನೂ  ಸೇರಿಸಬಹುದಾದ ರೀತಿಯಲ್ಲಿ ಅದನ್ನು ಗೌಪ್ಯವಾಗಿ ಇರಿಸಲಾಗಿದೆ.

ದಿಲ್ಲಿಯ ಎಲ್ಲ ಎಫ್‌ ಐಆರ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತದೆ. ಆದರೆ 59/2020 ಸಂಖ್ಯೆಯ ಎಫ್‌ ಐಆರ್ ಸಾರ್ವಜನಿಕವಾಗಿ ಲಭ್ಯವಿಲ್ಲ. ಆರೋಪಿತರು ಜಾಮೀನು ಅಪೇಕ್ಷಿಸಿ ನ್ಯಾಯಾಲಯವನ್ನು ಸಂಪರ್ಕಿಸುವಾಗಲಷ್ಟೇ ಆತ ತನ್ನ ಹೆಸರು ಈ ಎಫ್‌ ಐಆರ್‌ನಲ್ಲಿ ಒಳಗೊಂಡಿರುವ ವಿಚಾರ ಅರಿಯುತ್ತಾನೆ. ಪೊಲೀಸರು ನ್ಯಾಯಾಲಯಕ್ಕೆ ನೀಡುವ ಮಾಹಿತಿಗಳಿಂದಷ್ಟೇ ವಕೀಲರಿಗೆ ಈ ಎಫ್‌ ಐಆರ್ ಪ್ರಕಾರವಿರುವ ವಿವರಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಈ ಕೇಸಿನ ಪರ ವಕೀಲರು ಹೇಳುತ್ತಾರೆ.

 ಕಾನೂನು ಪಾಲಿಸದ ಕಾನೂನು ಪಾಲಕರು

ದಿಲ್ಲಿ ಪೊಲೀಸರ ಪ್ರಕಾರ, ಆಳುವ ವರ್ಗವನ್ನು ಟೀಕಿಸುವುದು ಯುಎಪಿಎ ಪ್ರಕರಣ ದಾಖಲಿಸುವಷ್ಟರ ಮಟ್ಟಿಗೆ ಅತ್ಯಂತ ದೊಡ್ಡ ಅಪರಾಧವಾಗಿದೆ. ದಿಲ್ಲಿ ಪ್ರಕರಣಗಳಲ್ಲಿ ಗಲಭೆಗೆ ಕಿಡಿ ಹಚ್ಚಿದ ಸಂಘಪರಿವಾರದ ನಾಯಕರ ಮೇಲೆ ಯುಎಪಿಎ ಹೊರಿಸಬೇಕಿತ್ತು. ದುರದೃಷ್ಟವಶಾತ್, ಪೌರತ್ವ ಕಾನೂನಿನ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಮತ್ತು ಹೋರಾಟಗಾರರ ವಿರುದ್ಧ ದಿಲ್ಲಿ ಪೊಲೀಸರು ಯುಎಪಿಎ ಪ್ರಕರಣ ದಾಖಲಿಸಿದ್ದಾರೆ. ಗಲಭೆಯಲ್ಲಿ ಭಾಗಿಯಾದ ದಿಲ್ಲಿ ಪೊಲೀಸ್‌ನ ಅರೆ ಸೈನಿಕ ಪಡೆಯ ಕೆಲವರ ವರ್ತನೆಗಳನ್ನು ಜಗತ್ತು ನೇರವಾಗಿ ಕಂಡಿತು. ಅದರಿಂದ ತಮ್ಮನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ಪೊಲೀಸರು ಈ ವೇಳೆ ನಡೆಸುತ್ತಿದ್ದಾರೆ. ಆದರೆ ದಿಲ್ಲಿ ಗಲಭೆಯಲ್ಲಿ ಪೊಲೀಸರ ಪಾತ್ರವು ಮರೆಮಾಚಲು ಸಾಧ್ಯವಾಗದ ರೀತಿಯಲ್ಲಿ ಬಹಿರಂಗಗೊಂಡಿದೆ ಎಂದು ಅಡ್ವಕೇಟ್ ಅಕ್ರಮ್ ಖಾನ್ ಹೇಳುತ್ತಾರೆ.

 ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಹಲವಾರು ನಿರ್ಬಂಧಗಳಿವೆ. ಬಂಧಿತರಿಗೆ ತಮ್ಮ ಕುಟುಂಬಸ್ಥರು, ವಕೀಲರು ಮೊದಲಾದವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹೈಕೋರ್ಟಿನಲ್ಲಿ ಅರ್ಜಿ ಹಾಕಿದ ನಂತರ ಹಲವಾರು ಆರೋಪಿಗಳಿಗೆ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ನಿರಾಕರಿಸಲಾಯಿತು.

 ಜಾಮೀನು ಲಭಿಸುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಠಾಣೆಯಲ್ಲಿ ಜಾಮೀನು ನಿರಾಕರಣೆಯ ವಿರುದ್ಧ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕ್ರಮ ತೆಗೆದುಕೊಂಡು ದಾಖಲೆಯ ಮೂಲಕ ಜವಾಬು ನೀಡಬೇಕೆಂದು ತನಿಖಾಧಿಕಾರಿಗೆ ಸೂಚಿಸಿದ್ದಾರೆ. ಆದರೆ ಉತ್ತರಿಸಲು ತನಿಖಾಧಿಕಾರಿಗಳು ತೀವ್ರ ನಿರ್ಲಕ್ಷ ತೋರುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ತನಿಖಾಧಿಕಾರಿಗಳು ಪಾಲಿಸಬೇಕಾದ ಸೂಚನೆಗಳ ಕುರಿತು ನ್ಯಾಯಾಲಯದಲ್ಲಿ ಹಲವು ಮಾರ್ಗಸೂಚಿಗಳಿವೆ. ಓರ್ವ ವ್ಯಕ್ತಿಯನ್ನು ಬಂಧಿಸುವ ಮಾರ್ಗಸೂಚಿಗಳಲ್ಲಿ ಯಾವುದನ್ನೂ ದಿಲ್ಲಿಯ ಪ್ರಕರಣಗಳಲ್ಲಿ ಪಾಲಿಸಲಾಗಿಲ್ಲ. ಠಾಣಾ ಜಾಮೀನು ಲಭಿಸುವ ಅಪರಾಧಕ್ಕೂ ಜಾಮೀನು ನೀಡದೇ ಇರುವುದು ದಿಲ್ಲಿ ಪೊಲೀಸರ ಕಾನೂನು ವಿರೋಧಿ ಮನೋಸ್ಥಿತಿಯಾಗಿದೆ ಎಂದು ಅಡ್ವಕೇಟ್ ಶರ್ಜಿಲ್ ಹೇಳುತ್ತಾರೆ.

ಮುಸ್ಲಿಮರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈಶಾನ್ಯ ದಿಲ್ಲಿಯ ಪೊಲೀಸ್ ಠಾಣೆಗಳಲ್ಲಿ 750ಕ್ಕೂ ಅಧಿಕ ಎಫ್‌ಐಆರ್‌ಗಳು ದಾಖಲಾಗಿವೆ. ಅದರ ಭಾಗವಾಗಿ ಈಗ ಕೆಲವು ಬಂಧನಗಳು ನಡೆದಿವೆ ಎಂದು ಆತ ಹೇಳುತ್ತಾರೆ. ಆದರೆ ಒಂದು ಗುಂಪನ್ನು ಮಾತ್ರ ಯುಎಪಿಎನಂತಹ ಕರಾಳ ಕಾನೂನುಗಳನ್ನು ಹೊರಿಸಿ ಬಂಧಿಸುವ ಕ್ರಮ ಪೊಲೀಸರಿಂದ ನಡೆಯುತ್ತಿದೆ ಎಂದು ವಕೀಲರು ಹೇಳುತ್ತಾರೆ. ಗಲಭೆಯಲ್ಲಿ ಪಾಲ್ಗೊಂಡವರೆಂದು ಹೇಳಲಾಗುವವರ ಆರೋಪದ ತಪ್ಪೊಪ್ಪಿಗೆ ಹೊರಬರುತ್ತಿದೆ. ಹೇಳಿಕೆಯಲ್ಲಿ ಹೆಚ್ಚಿನವು ಒಂದೇ ಅಚ್ಚಿನಲ್ಲಿ ನೀಡಿದಂತಿದೆ. ಮೌಖಿಕ ಹೇಳಿಕೆಗಳಲ್ಲೂ ವ್ಯತ್ಯಾಸ ಕಾಣುತ್ತಿಲ್ಲ. ದಾಖಲೆಗಳಿಲ್ಲದ ಮುಸ್ಲಿಮರು ದೇಶದಿಂದ ಹೊರ ತಳ್ಳಲ್ಪಡುವರು ಎಂಬ ಕಾರಣದಿಂದ ಗಲಭೆಯುಂಟಾಗಿದೆ ಮತ್ತು ಹಿಂದೂಗಳ ವಿರುದ್ಧ ಗಲಭೆ ನಡೆದಿವೆ ಎಂಬಂತ ತಪ್ಪೊಪ್ಪಿಗೆ ಹೇಳಿಕೆಗಳನ್ನು ಕಾಣಬಹುದಾಗಿದೆ.

 ಬೇಕಾಬಿಟ್ಟಿ ಪ್ರಕರಣ ದಾಖಲೆ

 59/2020 ಎಫ್‌ ಐಆರ್ ಪ್ರಕಾರ ಮೊತ್ತಮೊದಲು ಪಾಪ್ಯುಲರ್ ಫ್ರಂಟ್ ದಿಲ್ಲಿ ರಾಜ್ಯಾಧ್ಯಕ್ಷ, ಕಾರ್ಯದರ್ಶಿ ಸಹಿತ ಮೂವರ ಬಂಧನವಾಯಿತು. ಇದರಲ್ಲಿ ಮೊತ್ತಮೊದಲು ಬಂಧಿತರಾದ ದಾನಿಷ್‌ರನ್ನು ವಿಚಾರಣೆಗಾಗಿ ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿಡಲಾಯಿತು. ಆದರೆ ಪಾಪ್ಯುಲರ್ ಫ್ರಂಟ್ ಪೊಲೀಸರ ಈ ಕ್ರಮವನ್ನು ನ್ಯಾಯಾಲಯದ ಮೂಲಕ ಎದುರಿಸಿದಾಗ ಕಸ್ಟಡಿಯನ್ನು ರದ್ದುಪಡಿಸಲಾಯಿತು. ಆ ನಂತರ ಈ ಪ್ರಕರಣದಲ್ಲಿ ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್, ಸಫೂರ ಝರ್ಗರ್ ಎಂಬವರನ್ನು ಸೇರಿಸಲಾಯಿತು. ಮೊದಲು ಜಾಮೀನು ದೊರಕುವ, ಐಪಿಸಿ 147, 148, 149, 120ಬಿ ಮೊದಲಾದ ನಾಲ್ಕು ಸೆಕ್ಷನ್‌ ಗಳನ್ನು ಹಾಕಲಾಯಿತು. ನಂತರ ಐಪಿಸಿ 302 ಸಹಿತ 25ರಷ್ಟು ಸೆಕ್ಷನ್ ಗಳನ್ನು ಸೇರಿಸಲಾಯಿತು ಎಂದು ತಿಳಿಸಲಾಯಿತು. ಕೊನೆಗೆ ಯುಎಪಿಎಯನ್ನು ಸೇರಿಸಿ ತಾಹಿರ್ ಹುಸೈನ್, ಸಫೂರ ಝರ್ಗರ್ ಮೊದಲಾದವರನ್ನು ಪುನಃ ಬಂಧನಕ್ಕೊಳಪಡಿಸಲಾಯಿತು.

50ಕ್ಕೂ ಮಿಕ್ಕಿ ಜನರು ಹತ್ಯೆಗೊಳಗಾದ ದಿಲ್ಲಿ ಗಲಭೆಯಲ್ಲಿ 14ರಷ್ಟು ಮಸ್ಜಿದ್‌ಗಳು ಧ್ವಂಸಗೊಳಿಸಲ್ಪಟ್ಟರೂ ಒಂದೇ ಒಂದು ದೇವಸ್ಥಾನಕ್ಕೂ ಹಾನಿ ಸಂಭವಿಸಿದ್ದು ವರದಿಯಾಗಿಲ್ಲ. ಮಸ್ಜಿದ್ ಧ್ವಂಸಗೊಳಿಸಿದ ಪ್ರಕರಣಗಳಲ್ಲಿ ಬಂಧನ ಕಾರ್ಯ ನಡೆಸಿದ್ದು ಕೇವಲ ಹೆಸರಿಗೆ ಮಾತ್ರ. ಆದರೆ ಒಟ್ಟು ಗಲಭೆಯ ಹೊಣೆಗಾರರಾಗಿ ಪೊಲೀಸರು ಸಂತ್ರಸ್ತ ಮುಸ್ಲಿಮರನ್ನೇ ಗುರಿಪಡಿಸಿದರು. ಕೋವಿಡ್-ಲಾಕ್‌ ಡೌನ್‌ಮರೆಯಲ್ಲಿ ಅವರ ವಿರುದ್ಧ  ಕರಾಳ ಕಾನೂನುಗಳನ್ನು ಹೊರಿಸುವ ತರಾತುರಿಯಲ್ಲಿ ದಿಲ್ಲಿ ಪೊಲೀಸರಿದ್ದಾರೆ. ಮುಂದಿನ ದಿನಗಳಲ್ಲೂ ಪೊಲೀಸರ ಇಂತಹ ನಡೆಗಳು  ಯಾವುದೇ ತಡೆಯಿಲ್ಲದೆ ಮುಂದುವರಿಯಲಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಗಲಭೆಗೆ ಆರೆಸ್ಸೆಸ್ ನೆರವು

ದಿಲ್ಲಿ ಗಲಭೆಯಲ್ಲಿ ವ್ಯಾಪಕವಾಗಿ ಹಿಂದುತ್ವ ಗುಂಪುಗಳು ಬಾಂಬ್, ಕೋವಿ ಉಪಯೋಗಿಸಿದ್ದರೆಂಬ ವರದಿಗಳು ಹೊರಬರುತ್ತಿವೆ. ಸಂತ್ರಸ್ತರು ತಾವು ನೀಡಿದ ದೂರಿನಲ್ಲಿ ತಮ್ಮ ಮನೆ, ಅಂಗಡಿ ಮುಂಗಟ್ಟುಗಳನ್ನು ಬಾಂಬ್ ಹಾಕಿ ಸ್ಫೋಟಿಸಲಾಗಿದೆ ಎಂದು ದಾಖಲಿಸಿದ್ದಾರೆ. ಆದರೆ ಆ ದೂರುಗಳನ್ನು ಸ್ವೀಕರಿಸಲು ದಿಲ್ಲಿ ಪೊಲೀಸರು ತಯಾರಾಗುತ್ತಿಲ್ಲ. ಕಾರಣ ರಾಜಧಾನಿ ದಿಲ್ಲಿಯಲ್ಲಿ ಬಾಂಬ್ ಬಳಸಿ ಗಲಭೆ ನಡೆಸಲಾಗಿ ಎಂಬುದನ್ನು ಪೊಲೀಸರು ಒಪ್ಪುತ್ತಿಲ್ಲ. ದೂರು ನೀಡಿದ ಹಲವರು ತಮ್ಮ ಅಂಗಡಿಗಳನ್ನು ಬಾಂಬ್ ಹಾಕಿ ಧ್ವಂಸಗೊಳಿಸಿದ್ದಕ್ಕೆ ಸಾಕ್ಷಿಗಳಾಗಿದ್ದಾರೆ. ಹಾಗಿದ್ದರೂ ಪೊಲೀಸರು ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಈ ಕಾರಣದಿಂದಲೇ ದೂರುದಾರರು ಪುನಃ ಪೊಲೀಸ್ ಹೆಲ್ಪ್ ಡೆಸ್ಕ್‌ನಲ್ಲಿ ದೂರು ನೀಡುತ್ತಿದ್ದಾರೆ. ಸಲೀಮ್ ಕಫ್ತಾರ್‌ ನ ಅಂಗಡಿಯನ್ನು ಧ್ವಂಸಗೊಳಿಸಿ, ಆತನ ಸಹೋದರನನ್ನು ಗುಂಡು ಹಾರಿಸಿ ಕಾಲಿಗೆ ಬಾಂಬನ್ನು ಕಟ್ಟಿ ಸ್ಫೋಟಿಸಿ ಕೊಲ್ಲಲಾಯಿತು. ಪಕ್ಕದ ಮನೆಯಿಂದ ಈ ಕೃತ್ಯವನ್ನು ಕಣ್ಣಾರೆ ಕಂಡ ಸಲೀಮ್‌ ನ ದೂರನ್ನು ಯಥಾವತ್‌ ಸ್ವೀಕರಿಸಲು ಪೊಲೀಸರು ಸಿದ್ಧರಿಲ್ಲ. ಆರೋಪಿತ ವ್ಯಕ್ತಿಗಳನ್ನು ನಿಖರವಾಗಿ ಗುರುತಿಸಿ ದೂರು ನೀಡಿದ ನಂತರವೂ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲು ಪೊಲೀಸರು ಒಪ್ಪುತ್ತಿಲ್ಲ. ದೂರಿನಿಂದ ಆ ಹೆಸರುಗಳನ್ನು ತೆಗೆದು ಹಾಕಿ, ಹೊಸ ಹೆಸರುಗಳನ್ನು ಸೇರಿಸುವ ಮತ್ತು ದಾಳಿಕೋರರು ಅಪರಿಚಿತರು ಎಂಬ ರೀತಿಯಲ್ಲಿ ತನಿಖೆಯನ್ನು ಮುಂದುವರಿಸುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ. ದೃಢವಾಗಿ ನಿಂತ ದೂರುದಾರರನ್ನೇ ಕೊಲೆಪಾತಕ, ಮತ್ತಿತರ ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆಯೊಡ್ಡುತ್ತಿದ್ದಾರೆ. ಗಲಭೆಯ ಕುರಿತು ಮಾಹಿತಿ ನೀಡಿದವರಲ್ಲಿ ಹೆಚ್ಚಿನ ಮಂದಿ ಉಲ್ಲೇಖಿಸಿದ ಒಂದು ಸ್ಥಳವಾಗಿದೆ ಮೋಹನ್ ನರ್ಸಿಂಗ್ ಹೋಮ್. ಅದರ ಛಾವಣಿಯಿಂದ ಗುಂಡು ಹಾರಾಟ ನಡೆದ ಬಗ್ಗೆ ಹಲವಾರು ಮಂದಿ ಹೇಳಿಕೆ ನೀಡಿದ ಹೊರತಾಗಿಯೂ ದಾಖಲಾದ ಪ್ರಕರಣಗಳಿಂದ ಮೋಹನ್ ನರ್ಸಿಂಗ್ ಹೋಂ ಅನ್ನು ಕೈಬಿಡಲಾಗಿದೆ ಎಂದು ವರದಿಗಳು ಸೂಚಿಸುತ್ತವೆ.

ಮುಸ್ಲಿಮರ ವಿರುದ್ಧ ವ್ಯಾಪಕವಾಗಿ ಪ್ರಕರಣ ದಾಖಲಿಸಿ, ಪಿತೂರಿ ಪ್ರಕರಣ ಮತ್ತು ಯುಎಪಿಎಯನ್ನು ಹೊರಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ಸಾಕ್ಷಾಧಾರಗಳೆಲ್ಲವೂ ಹಿಂದುತ್ವ ಶಕ್ತಿಗಳ ವಿರುದ್ಧವಾಗಿ ಹೊರಬರುತ್ತಿವೆ. ಪೂರ್ವನಿಯೋಜಿತ ಗಲಭೆಗಾಗಿ ವಾಟ್ಸ್ಸಪ್ ಗ್ರೂಪ್‌ ಗಳನ್ನು ತಯಾರಿಸಿ ಕಾರ್ಯ ಪ್ರವೃತ್ತರಾಗಿದ್ದ ವಿಚಾರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ‘ಕಟ್ಟರ್ ಹಿಂದೂ ಏಕ್ತಾ’ ಎಂಬ ಹೆಸರಿನಲ್ಲಿ ಆರಂಭಿಸಿದ ಹೆಸರುಗಳು ಮೇಲಿಂದ ಮೇಲೆ ಬದಲಿಸಿ ಕೊನೆಗೆ ‘ಕಟ್ಟರ್ ಏಕ್ತ್ತಾ ಝಿಂದಾಬಾದ್’ ಎಂಬ ಹೆಸರಿನಲ್ಲಿ ಈ ಗ್ರೂಪ್ ಕಾರ್ಯಾಚರಿಸುತ್ತಿದೆ. ಫೆಬ್ರವರಿ 25ರಂದು ರಚನೆಯಾದ ಈ ಗ್ರೂಪಿನಲ್ಲಿ ಹೆಚ್ಚುಕಡಿಮೆ 123 ಮಂದಿ ಸದಸ್ಯರಿದ್ದಾರೆ. ಮಾರ್ಚ್ 8ಕ್ಕೆ 47 ಮಂದಿ ಈ ಗ್ರೂಪಿನಿಂದ ಹೊರಹೋಗಿದ್ದಾರೆ. ಈ ಗ್ರೂಪ್ ಗಳನ್ನು ಮಾಡಿ 24 ಗಂಟೆಗಳು ಕಳೆಯುವುದಕ್ಕಿಂತ ಮೊದಲೇ ಗಂಗಾ ವಿಹಾರ್‌ ನ ಲೋಕೇಶ್ ಸೋಲಂಕಿ ಎಂಬ ವ್ಯಕ್ತಿ, ”ಗ್ರೂಪ್‌ ನಲ್ಲಿ ಅಡಗಿ ಕುಳಿತು ನಿಮಗೇನು ಲಾಭವಿದೆ, ನಿಮಗೇನಾದರೂ ಮಾಡಲಿಕ್ಕಿದ್ದರೆ ರಸ್ತೆಗಿಳಿದು ಬನ್ನಿ. ಕಳೆದ ರಾತ್ರಿ ನಾನು ಭಾಗೀರಥಿ ವಿಹಾರ್, ಗಂಗಾ ವಿಹಾರ್, ಗೋಕುಲ್ ಪುರಿ, ಜೋರಿಪುರ್ ಮೊದಲಾದ ಕಡೆಗಳಲ್ಲಿ 23 ಮುಸ್ಲಿಮರ ತಲೆ ಕಡಿದು ಬಿಟ್ಟಿದ್ದೇನೆ” ಎಂಬ ಕಳುಹಿಸಿದ ಸಂದೇಶವನ್ನು ಕಳುಹಿಸಿದ್ದ.

ಗಲಭೆಗೆ ಆಹ್ವಾನ ನೀಡುವ, ಗುಂಪು ಸೇರುವ ಮೊದಲಾದ ವಿವಿಧ ಸಂದೇಶಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಫೆಬ್ರವರಿ 25ರಂದು ರಾತ್ರಿ 8 ಗಂಟೆ ತೋರಿಸುವ ಒಂದು ಸಂದೇಶದಲ್ಲಿ ಆರೆಸ್ಸೆಸ್‌ ನ ಕುರಿತಾದ ಉಲ್ಲೇಖವಿದೆ. ”ಸಹೋದರರೇ, ಬ್ರಿಜ್‌ಪುರಿಯಲ್ಲಿ ನಮಗೆ ಸಹಾಯ ಮಾಡಲು ಆರೆಸ್ಸೆಸ್‌ ನ ಸದಸ್ಯರು ತಲುಪಿದ್ದಾರೆ. ಬ್ರಿಜ್‌ಪುರಿಯಲ್ಲಿ ಒಂಬಂತ್ತಕ್ಕೂ ಮಿಕ್ಕಿ ಮುಸ್ಲಿಮರು ಕೊಲ್ಲಲ್ಪಟ್ಟಿದ್ದಾರೆ.” ಇದರ ಹೊರತು ಬಜರಂಗ ದಳದ ಮತ್ತು ಆರೆಸ್ಸೆಸ್‌ ನ ನಾಯಕರನ್ನು ಯಾವ ರೀತಿ ಸಂಪರ್ಕಿಸಬಹುದು ಎಂದು ಸದಸ್ಯರು ಕೇಳುತ್ತಿರುವುದು  ಮತ್ತು ಪ್ರಾದೇಶಿಕ ನಾಯಕರು ವಿಳಾಸವನ್ನು ನೀಡುವ ಸಂದೇಶಗಳು ಅವುಗಳಲ್ಲಿವೆ.

ಕಪಿಲ್ ಮಿಶ್ರಾನ ವೀಡಿಯೋ ಗ್ರೂಪಿನಲ್ಲಿ ನಿರಂತರವಾಗಿ ಹರಿದಾಡಿದ್ದು, ಆತನ ವಿರುದ್ಧ ಕೇಳಿ ಬಂದ ಹೇಳಿಕೆಗಳನ್ನು ಟೀಕಿಸುವ ಹಲವು ಸಂದೇಶಗಳಿವೆ. ಗ್ರೂಪಿನ 12 ಜನರ ಫೋನ್‌ಗಳನ್ನು ವಶಪಡಿಸಿದ ಪೊಲೀಸರು ಇವೆಲ್ಲವನ್ನೂ ತಪ್ಪೊಪ್ಪಿಗೆಯಂತೆ ಪರಿಗಣಿಸಿ ನ್ಯಾಯಾಲಯದಲ್ಲಿ ವರದಿ ನೀಡಲಿದ್ದೇವೆ ಎಂದು  ಪತ್ರಕರ್ತರಿಗೆ ಹೇಳಿಕೆ ನೀಡಿದ್ದಾರೆ. ದಿಲ್ಲಿ ಪೊಲೀಸರಾದ ಕಾರಣ ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕು ಎಂದಷ್ಟೇ ಹೇಳಬಹುದು.

Join Whatsapp