ಧಾರಾವಾಹಿ ಇತಿಹಾಸದಲ್ಲೇ ಹೊಸ ಸಂಚಲನ ಸೃಷ್ಟಿಸಿದ ‘ಮಹಾನಾಯಕ’ | ವರ್ಷದ ಅತ್ಯುನ್ನತ ಡಬ್ಬಿಂಗ್ ವಿಭಾಗದಲ್ಲಿ ಪ್ರಶಸ್ತಿ!

Prasthutha|

ಬೆಂಗಳೂರು : ರಾಜ್ಯ ಟಿವಿ ಸೀರಿಯಲ್ ಗಳ ಇತಿಹಾದಲ್ಲೇ ಅಚ್ಚರಿಯ ದಾಖಲೆ ಸೃಷ್ಟಿಸಿರುವ ‘ಜೀ ಕನ್ನಡ’ದಲ್ಲಿ ಪ್ರಸಾರವಾಗುವ ಡಾ. ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ‘ಮಹಾನಾಯಕ’ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಜೀ ಕನ್ನಡ ವತಿಯಿಂದ ನೀಡಲಾಗುವ ‘ಜೀ ಕುಟುಂಬ ಪ್ರಶಸ್ತಿ’ಯಲ್ಲಿ ‘ಮಹಾನಾಯಕ’ಗೆ ಈ ವರ್ಷದ ಡಬ್ಬಿಂಗ್ ವಿಭಾಗದಲ್ಲಿ ‘ಜೀ ಕುಟುಂಬ ಪ್ರಶಸ್ತಿ’ ಲಭಿಸಿದೆ ಎಂದು ವರದಿಯಾಗಿದೆ.

- Advertisement -

ಕಳೆದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ವಾರಾಂತ್ಯ ಶನಿವಾರ, ಭಾನುವಾರ ಸಂಜೆ 7 ಗಂಟೆಗೆ ಇದರ ಪ್ರಸಾರವಾಗಲಿದೆ ಎಂದು ‘ಜೀ ಕನ್ನಡ’ದ ಅನಿಲ್ ಕುಮಾರ್ ಜೆ. ಹೇಳಿರುವುದಾಗಿ ‘ನಾನುಗೌರಿ.ಕಾಂ’ ವರದಿ ಮಾಡಿದೆ.

‘ಜೀ ಕುಟುಂಬ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ‘ಮಹಾನಾಯಕ’ಗೆ ಪ್ರಶಸ್ತಿ ದೊರೆಯಲಿದೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕಾರ್ಯಕ್ರಮ ಕುರಿತ ವೀಡಿಯೊ ಪ್ರಮೋ ಒಂದು ‘ಜೀ ಕನ್ನಡ’ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿದ್ದು, ಅದು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿಯಿಂದ ವೀಕ್ಷಣೆಯಾಗಿದೆ. ಕೆಲವೇ ಗಂಟೆಗಳಲ್ಲೇ ವೀಡಿಯೊ ಮೂರೂವರೆ ಲಕ್ಷ ವೀಕ್ಷಣೆಯಾಗಿದ್ದು, 25 ಸಾವಿರಕ್ಕೂ ಹೆಚ್ಚು ಲೈಕ್ಸ್ ದೊರೆತಿವೆ ಮತ್ತು 2,000ಕ್ಕೂ ಹೆಚ್ಚು ಶೇರ್ ಗಳಾಗಿವೆ.

- Advertisement -

‘ಜೀ ಕನ್ನಡ’ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾದ ಈ ಪ್ರಮೋ ವೀಡಿಯೊದಲ್ಲಿ ವಾಹಿನಿಯ ಮುಖ್ಯ ನಿರ್ವಾಹಕ ರಾಘವೇಂದ್ರ ಹುಣಸೂರು ಮತ್ತು ಜನಪ್ರಿಯ ನಟ ಯಶ್ ‘ಮಹಾನಾಯಕ’ ಧಾರಾವಾಹಿ ಮತ್ತು ಡಾ. ಅಂಬೇಡ್ಕರ್ ಬಗ್ಗೆ ಮಾತನಾಡುವ ಅಂಶಗಳಿವೆ.

‘ಮಹಾನಾಯಕ’ ಧಾರಾವಾಹಿ ಆರಂಭಿಸಿದಾಗ ತಮಗೆ ಬೆದರಿಕೆಗಳು ಬಂದಿದ್ದಾಗ, ಕರೆ ಮಾಡಿದ ವ್ಯಕ್ತಿಯೊಬ್ಬರು, ಏನೇ ಆಗಲಿ ಅದನ್ನು ಎದುರಿಸುವ ಎಂದು ಧೈರ್ಯ ತುಂಬಿದರು ಎಂದು ಪ್ರಮೋ ವೀಡಿಯೊದಲ್ಲಿ ರಾಘವೇಂದ್ರ ಹುಣಸೂರು ಹೇಳುವಾಗ, ನಟ ಯಶ್ ಆಗಮಿಸುತ್ತಾರೆ. ನಟ ಯಶ್ ಡಾ. ಅಂಬೇಡ್ಕರ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡುವುದನ್ನು ಎಲ್ಲರೂ ಸಂಭ್ರಮಿಸುತ್ತಾರೆ.

ಸಾಮಾನ್ಯವಾಗಿ ಎಂತದ್ದೇ ಜನಪ್ರಿಯ ಧಾರಾವಾಹಿಗೆ ಈ ಪ್ರಮಾಣದಲ್ಲಿ ಜನ ಸ್ವಯಂ ಪ್ರೇರಿತವಾಗಿ ಅಭಿಮಾನ ತೋರಿಸಿದ್ದಿಲ್ಲ. ಆದರೆ, ಡಾ. ಬಿ.ಆರ್. ಅಂಬೇಡ್ಕರ್ ಜೀವನಾಧಾರಿತ ಈ ಧಾರಾವಾಹಿಗೆ ಮಾತ್ರ ದಾಖಲೆಯ ಬೆಂಬಲ ದೊರೆಯುತ್ತಿದೆ.

ಅನಿವಾರ್ಯ ಕಾರಣಗಳಿಂದ ಧಾರಾವಾಹಿಯ ಒಂದು ಕಂತು ಪ್ರಸಾರವಾಗದೇ ಇದ್ದಾಗ, ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನ ತಮ್ಮ ಆಕ್ರೋಶ ಹೊರಹಾಕಿದ್ದ ಘಟನೆ ಈ ಹಿಂದೆ ನಡೆದಿತ್ತು. ಕೊನೆಗೆ ವಾಹಿನಿಯು ಆ ಬಗ್ಗೆ ರಾತೋರಾತ್ರಿ ಸ್ಪಷ್ಟನೆಯನ್ನು ನೀಡಬೇಕಾಯಿತು.

ಧಾರಾವಾಹಿಗೆ ಸಂಬಂಧಿಸಿದ ಫ್ಲೆಕ್ಸ್ ಗಳು ರಾಜ್ಯಾದ್ಯಂತ ಜನರು ಸ್ವಯಂ ಪ್ರೇರಣೆಯಿಂದ ಹಾಕಿ ಸಂಭ್ರಮಿಸಿದ್ದಾರೆ. ಈ ಕುರಿತೇ ಸಾಕಷ್ಟು ಕಾರ್ಯಕ್ರಮಗಳು ನಡೆದು, ‘ಜೀ ಕನ್ನಡ’ಕ್ಕೆ ತಮ್ಮ ಅಭಿಮಾನ ತೋರಿಸಿದ್ದಾರೆ. ಧಾರಾವಾಹಿ ಪ್ರಸಾರ ಮಾಡದಂತೆ ರಾಘವೇಂದ್ರ ಹುಣಸೂರು ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ತಿಳಿದಾಗ, ರಾಜ್ಯಾದ್ಯಂತ ಭಾರೀ ಬೆಂಬಲ ‘ಜೀ ಕನ್ನಡ’ ವಾಹಿನಿಗೆ ವ್ಯಕ್ತವಾಗಿತ್ತು.    

Join Whatsapp