August 13, 2020

ದೆಹಲಿ | ಮಸೀದಿ ಬಳಿ ಕೇಸರಿ ಧ್ವಜ | ವರದಿಗೆ ತೆರಳಿದ ಪತ್ರಕರ್ತರಿಗೆ ಗುಂಪಿನಿಂದ ಹಲ್ಲೆ

Test
Tests

ದೆಹಲಿ: ಮಸೀದಿಯೊಂದರ ಪಕ್ಕ ಕೇಸರಿ ಧ್ವಜ ಹಾಕಿದ್ದುದರ ಬಗ್ಗೆ ವರದಿಗಾರಿಕೆಗೆ ತೆರಳಿದ್ದ ಕ್ಯಾರವಾನ್ ಮ್ಯಾಗಜಿನ್ ನ ಮೂವರು ಪತ್ರಕರ್ತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈಶಾನ್ಯ ದೆಹಲಿಯ ಸುಭಾಷ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಪತ್ರಕರ್ತ ಪ್ರಭಾಜೀತ್ ಸಿಂಗ್, ಮ್ಯಾಗಜಿನ್ ನ ಸಹಾಯಕ ಫೋಟೊ ಸಂಪಾದಕ ಶಹೀದ್ ತಂತ್ರೆ ಮತ್ತು ಪತ್ರಕರ್ತೆಯೊಬ್ಬರ ಮೇಲೆ ಈ ದಾಳಿ ನಡೆದಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ರಕ್ಷಣೆ ಮಾಡಿದ್ದಾರೆ.

ನಾವು ವೀಡಿಯೊ ವರದಿಗಾಗಿ ಶೂಟಿಂಗ್ ನಡೆಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳು ಬಂದರು. ಯಾಕೆ ವೀಡಿಯೊ ಮಾಡುತ್ತಿರುವುದು ಎಂದು ಪ್ರಶ್ನಿಸಿದರು. ಮಸೀದಿಯೊಂದರ ಪಕ್ಕ ಕೇಸರಿ ಧ್ವಜಗಳನ್ನು ಹಾಕಿದ್ದ ಬಗ್ಗೆ ಒಬ್ಬರು ಫೋನ್ ಮಾಡಿ ನಮಗೆ ತಿಳಿಸಿದರು ಎಂದು ನಾವು ಅವರಿಗೆ ತಿಳಿಸಿದೆವು. ಅದಕ್ಕೆ, ಯಾರು ಫೋನ್ ಮಾಡಿದ್ದು ತಿಳಿಸಿದ್ದು ಎಂದು ಹೇಳಿ ಎಂಬುದಾಗಿ ಒತ್ತಾಯಿಸಲಾರಂಭಿಸಿದರು. ಆದರೆ, ನಾವು ಅದಕ್ಕೆ ನಿರಾಕರಿಸಿದೆವು. ನಮ್ಮನ್ನು ಹಾಗೂ ಫೋನ್ ಮಾಡಿದ ವ್ಯಕ್ತಿಯನ್ನು ಕೊಲ್ಲುತ್ತೇವೆ ಎಂದು ಅವರು ನಮಗೆ ಬೆದರಿಕೆ ಹಾಕಿದರು. ಅವರು ಹೆಚ್ಚಿನ ಜನರನ್ನು ಕರೆದರು, ಅಷ್ಟರಲ್ಲಿ ತುಂಬಾ ಜನ ಜಮಾಯಿಸಿದರು. ನಮ್ಮ ಪ್ರೆಸ್ ಕಾರ್ಡ್ ತೋರಿಸುವಂತೆ ತಿಳಿಸಿದರು. ನಾವು ತೋರಿಸಿದಾಗ, ನನ್ನ ಹೆಸರು ನೋಡಿ ನಿಂದನಾತ್ಮಕ ಶಬ್ದಗಳಲ್ಲಿ ಬೈಯಲಾರಂಭಿಸಿದರು ಎಂದು ಶಹೀದ್ ತಂತ್ರೆ ಹೇಳಿದ್ದಾರೆ.
ಶಹೀದ್ ಅವರ ಕ್ಯಾಮೆರಾ ಕಿತ್ತುಕೊಳ್ಳಲು ಪ್ರಯತ್ನಿಸಿದರು ಮತ್ತು ಅವರಿಗೆ ಹಲ್ಲೆ ನಡೆಸಿದರು. ಫೋಟೊ ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡುವಂತೆ ಅವರು ಒತ್ತಾಯಿಸಿದರು. ನನಗೂ ಒದ್ದರು ಮತ್ತು ಕೆನ್ನೆಗೆ ಬಾರಿಸಿದರು ಎಂದು ಸಿಂಗ್ ತಿಳಿಸಿದ್ದಾರೆ.

ವರದಿ ಮಾಡುವುದಕ್ಕಾಗಿ ಆ ಪ್ರದೇಶಕ್ಕೆ ಅವರು ಹೋಗಿದ್ದ ಅವರಿಗೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ, ಯಾರೊಬ್ಬರಿಗೂ ಗಾಯಗಳಾಗಿಲ್ಲ. ಪೊಲೀಸರು ಸುರಕ್ಷಿತವಾಗಿ ಅವರನ್ನು ಹೊರ ಕರೆತಂದರು ಎಂದು ಡಿಸಿಪಿ ವೇದಪ್ರಕಾಶ್ ಸೂರ್ಯ ಹೇಳಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ