ದಲಿತ ಯುವಕನ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಅಮಾನವೀಯ: ಎಸ್‌ಡಿಪಿಐ

Prasthutha|

ಬೆಂಗಳೂರು: ಬೈಕ್‌ ಮುಟ್ಟಿದ್ದನ್ನೆ ನೆಪವಾಗಿಟ್ಟುಕೊಂಡು ವಿಜಯಪುರದಲ್ಲಿ ದಲಿತ ಯುವಕನನ್ನು ಸವರ್ಣೀಯ ಗುಂಪೊಂದು ಅರೆಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅತ್ಯಂತ ಅವಮಾನವೀಯವಾಗಿದೆ ಮತ್ತು ಈ ಘಟನೆಯಿಂದಾಗಿ ಶಾಂತಿ, ಸೌಹಾರ್ದತೆಯ ಬೀಡಾಗಿರುವ ನಮ್ಮ ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಕಪ್ಪು ಚುಕ್ಕೆ ದೊರಕಿದಂತಾಗಿದೆ ಎಂದು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯಾಧ್ಯಕ್ಷ ಇಲ್ಯಾಸ್‌ ಮುಹಮ್ಮದ್‌ ತುಂಬೆ ಹೇಳಿದ್ದಾರೆ.

- Advertisement -

ಸಂತ್ರಸ್ತನ ತಂದೆ ಯಂಕಪ್ಪ ಹುಸೇನಪ್ಪ ತಳವಾರ ಅವರು ನೀಡಿದ ದೂರಿನ ಮೇರೆಗೆ 13ಕ್ಕೂ ಹೆಚ್ಚು ಸವರ್ಣೀಯರ ಮೇಲೆ ತಾಳಿಕೋಟೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಆದರೆ ಪೊಲೀಸರು ಓರ್ವನನ್ನು ಮಾತ್ರ ವಿಚಾರಣೆ ನಡೆಸಿ ಕೈ ತೊಳೆದುಕೊಂಡಿದ್ದಾರೆ. ಸಂಪ್ರದಾಯದಂತೆ ಈ ಪ್ರಕರಣವನ್ನು ಸಹ ಇಲಾಖೆ ಮುಚ್ಚಿ ಹಾಕಲಿದೆ ಎಂಬ ಆತಂಕ ಜನತೆಗೆ ಕಾಡುತ್ತಿದೆ. ಇದಕ್ಕೆ ಬದಲಾಗಿ ಪೊಲೀಸ್‌ ಇಲಾಖೆ ಪ್ರಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಬೇಕೆಂದು ಇಲ್ಯಾಸ್ ಮುಹಮ್ಮದ್‌ ಒತ್ತಾಯಿಸಿದ್ದಾರೆ.

25ಕ್ಕೂ ಹೆಚ್ಚು ಜನರಿದ್ದ ಕಿಡಿಗೇಡಿಗಳಗುಂಪು ಅಮಾಯಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದಲ್ಲದೇ, ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿರುವುದನ್ನು ಗಮನಿಸಿದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆದೆ ಎಂಬುವುದನ್ನು ಗಮನಿಸಬಹುದಾಗಿದೆ.ಆರೋಪಿಗಳೆಲ್ಲರೂ ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್‌.ಪಾಟೀಲ್ ನಡಹಳ್ಳಿಯವರ ಹಿಂಬಾಲಕರಾಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಶಾಸಕರ ಬೆಂಬಲದಿಂದಲೇ ರಾಜರೋಷವಾಗಿ ಕಿಡಿಗೇಡಿಗಳು ಇಂತಹ ಕುಕೃತ್ಯಗಳಲ್ಲಿ ತೊಡಗಿದ್ದಾರೆ ಎಂಬ ಕಟು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಪೊಲೀಸ್‌ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನಿಗಾವಹಿಸಬೇಕೆಂದು ಇಲ್ಯಾಸ್‌ ಮುಹಮ್ಮದ್‌ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp