ತೀರ್ಪು ನ್ಯಾಯಕ್ಕೆ ದೂರ: ಮುಸ್ಲಿಂ ಪರ್ಸನಲ್ ಲಾ ಬೋರ್ಡ್

Prasthutha|

ಹೊಸದಿಲ್ಲಿ: ಬಾಬರಿ ಮಸ್ಜಿದ್ ಧ್ವಂಸ ಪ್ರಕರಣದಲ್ಲಿ ಸಿಬಿಐ ನೀಡಿದ ತೀರ್ಪು ಕಾನೂನು ಮತ್ತು ಸಾಕ್ಷ್ಯಗಳ ಮೇಲೆ ಆಧಾರಿತವಾಗದೆ ನ್ಯಾಯದಿಂದ ತುಂಬಾ ದೂರವಾಗಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ವಾಲಿ ರಹ್ಮಾನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 ಆರೋಪಿಗಳನ್ನು ಖುಲಾಸೆಗೊಳಿಸಿದ ಕಾರಣ ಏನೇ ಇರಲಿ. ಮಸೀದಿಯನ್ನು ಧ್ವಂಸಗೊಳಿಸಿದ ಫೋಟೋ ಮತ್ತು ವೀಡಿಯೋಗಳನ್ನು ಎಲ್ಲರೂ ನೋಡಿದ್ದಾರೆ. ಸಂಚು ರೂಪಿಸಿದವರು ಯಾರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಅವರು ಹೇಳಿದ್ದಾರೆ.

- Advertisement -

1994ರಲ್ಲಿ ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರ ಪೀಠವು ಬಾಬರೀ ಮಸೀದಿ ಧ್ವಂಸವನ್ನು “ರಾಷ್ಟ್ರೀಯ ನಾಚಿಕೆಗೇಡು” ಎಂದು ಬಣ್ಣಿಸಿತ್ತು. ಇದು ಕಾನೂನಿನ ನಿಯಮ ಮತ್ತು ಸಾಂವಿಧಾನಿಕ ಪ್ರಕ್ರಿಯೆಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸಿದೆ ಮತ್ತು 500 ವರ್ಷಗಳಷ್ಟು ಹಳೆಯ ಕಟ್ಟಡವು ರಾಜ್ಯ ಸರಕಾರದ ಕೈಯಲ್ಲಿ ಸುರಕ್ಷಿತವಾಗಲಿದೆ ಎಂಬ ಪವಿತ್ರ ನಂಬಿಕೆಯನ್ನು ನುಚ್ಚುನೂರು ಮಾಡಿದೆ ಎಂದು ನ್ಯಾಯಾಲಯ ಹೇಳಿಕೆ ನೀಡಿತ್ತು ಎಂದು ಅವರು ಸ್ಮರಿಸಿದ್ದಾರೆ.

ಭಾರತೀಯ ಮುಸ್ಲಿಮರು ಸಂವಿಧಾನದ ಪರ ನಿಲ್ಲುತ್ತಾರೆ. ಅದನ್ನು ರಕ್ಷಿಸುತ್ತಾರೆ ಮತ್ತು ಅದರ ಮೌಲ್ಯಗಳನ್ನು ನಂಬುತ್ತಾರೆ. ಕಾನೂನಿನ ನಿಯಮವನ್ನು ಎತ್ತಿ ಹಿಡಿಯಲು ತಾವು ಮೇಲ್ಮನವಿ ಸಲ್ಲಿಸುವಂತೆ ಸಿಬಿಐಗೆ ಮನವಿ ಮಾಡಲಿದ್ದೇವೆ ಎಂದು ಮೌಲಾನಾ ಮುಹಮ್ಮದ್ ವಾಲಿ ರಹ್ಮಾನಿ ತಿಳಿಸಿದ್ದಾರೆ.

- Advertisement -