ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಗೆ ಕೊಲೆ ಬೆದರಿಕೆ | ಆರೋಪಿ ರಂಜಿತ್ ಬಂಧನ

Prasthutha|

ಮಂಗಳೂರು : ದಕ್ಷಿಣ ಕನ್ನಡದಿಂದ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಮಿಜಾರು ನಿವಾಸಿ ರಂಜಿತ್ (20) ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಗೋ ಸಾಗಾಟದ ವಿಷಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಅವರು ಸೋಮವಾರ ಸೂಚನೆಯೊಂದನ್ನು ನೀಡಿದ್ದರು. ಈ ಬಗ್ಗೆ ವಾಟ್ಸಪ್ ಗ್ರೂಪ್ ಒಂದರಲ್ಲಿ ಚರ್ಚೆ ನಡೆದಿದ್ದು, ಅದರಲ್ಲಿ ಕೂಲಿ ಕಾರ್ಮಿಕ ರಂಜಿತ್ ಜಿಲ್ಲಾಧಿಕಾರಿ ಅವರಿಗೆ ಕೊಲೆ ಬೆದರಿಕೆಯೊಡ್ಡಿ, ನಿಂದಿಸಿದ್ದ ಬಗ್ಗೆ ವರದಿಯಾಗಿತ್ತು. ಈ ಚರ್ಚೆಯ ಸ್ಕ್ರೀನ್ ಶಾಟ್ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೇ ವೇಳೆ, ಇನ್ನೊಂದೆಡೆ ತುರ್ತು ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ಅವರ ವರ್ಗಾವಣೆ ಆದೇಶವೂ ಹೊರಬಿದ್ದಿತ್ತು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ಬಂಧನಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಒತ್ತಾಯ ಕೇಳಿಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ. ಮೂಡುಬಿದಿರೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.

Join Whatsapp