ಚಂದ್ರನಲ್ಲಿಗೆ ಹಾರಲಿದ್ದಾಳೆ ಇಸ್ರೊದ ಮಾತನಾಡುವ, ಸಂಶೋಧಿಸುವ ಈ ರೊಬೊಟ್ ಸುಂದರಿ!

Prasthutha|

ಬಾಹ್ಯಾಕಾಶ ಸಂಶೋಧನೆಗಳನ್ನು ನಡೆಸುವ ನಮ್ಮ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈಗಾಗಲೇ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿ ಜಗತ್ತಿನ ಗಮನ ಸೆಳೆದಿದೆ. ಚಂದ್ರನ ಅಂಗಳಕ್ಕೆ ಇದೀಗ ಹೊಸ ಸಾಧನೆಯೊಂದಿಗೆ ಮೂರನೇ ಚಂದ್ರಯಾನವನ್ನು ನಡೆಸಲು ಈಗಾಗಲೇ ಸಿದ್ಧತೆ ನಡೆದಿದೆ. ಈ ವರ್ಷಾಂತ್ಯಕ್ಕೆ ಚಂದ್ರಯಾನ್ -3 ಉಡಾವಣೆ ನಡೆಸುವುದು ಬಹುತೇಕ ಖಚಿತಗೊಂಡಿದೆ. ಮಾನವ ರಹಿತ ಈ ಬಾಹ್ಯಾಕಾಶ ನೌಕೆಯಲ್ಲಿ ಈ ಬಾರಿ ಇಸ್ರೊ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮಹಿಳಾ ರೂಪದ ರೋಬೊಟ್ ಅನ್ನು ಅದು ಚಂದ್ರನ ಅಂಗಳಕ್ಕೆ ಕಳುಹಿಸಲಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.

- Advertisement -

ಈ ಮಾನವ ರೂಪದ (ಹ್ಯೂಮನಾಯ್ಡ್) ರೋಬೊಟ್ ವಿಜ್ಞಾನಿಗಳೊಂದಿಗೆ, ಬಾಹ್ಯಾಕಾಶ ಯಾನಿಗಳು, ತಂತ್ರಜ್ಞರೊಂದಿಗೆ ಸಂವಹನ ನಡೆಸಲಿದೆ ಮತ್ತು ಹೆಚ್ಚಿನ ಸಂಶೋಧನೆಗೆ ನೆರವಾಗಲಿದೆ. ಮಹಿಳಾ ರೂಪದ ಈ ರೋಬೊಟ್ ಗೆ ವ್ಯೋಮಿತ್ರಾ ಎಂದು ನಾಮಕರಣ ಮಾಡಲಾಗಿದೆ. ಅರ್ಧ ದೇಹದ ವ್ಯೋಮಿತ್ರಾ ನಡೆಯಲಾರಳು. ಕಾಲುಗಳಿಲ್ಲದಿರುವುದರಿಂದ ದೇಹದ ಅರ್ಧ ಭಾಗದಲ್ಲಿ ಮಾತ್ರ ಕಾರ್ಯ ನಿರ್ವಹಿಸಬಲ್ಲಳು. ಈಗಾಗಲೇ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಈ ಮಹಿಳಾ ರೋಬೊಟ್ ಅನ್ನು ಬಿಡುಗಡೆಗೊಳಿಸಲಾಗಿದ್ದು, ಅದರ ವೀಡಿಯೊವೊಂದನ್ನು ಬಹಿರಂಗ ಪಡಿಸಲಾಗಿದೆ.

“ನಾನು ನಿಮ್ಮ ಒಡನಾಡಿಯಾಗಬಲ್ಲೆ, ಗಗನಯಾತ್ರಿಗಳ ಜೊತೆ ಮಾತನಾಡಬಲ್ಲೆ, ಅವರನ್ನು ಗುರುತಿಸಬಲ್ಲೆ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಬಲ್ಲೆ ಎಂದು ವ್ಯೋಮಿತ್ರಾ ವೀಡಿಯೊದಲ್ಲಿ ಹೇಳಿದ್ದಾಳೆ. ಗಗನಯಾತ್ರೆ ವೇಳೆ ವ್ಯೋಮಿತ್ರಾ ಚಂದ್ರನಲ್ಲಿ ಹಲವು ಸಂಶೋಧನೆಗಳಿಗೆ ನೆರವಾಗಲಿದ್ದಾಳೆ ಮತ್ತು ಇಸ್ರೋ ನಿಯಂತ್ರಣ ಕೇಂದ್ರದ ಸಂಪರ್ಕದಲ್ಲಿ ಇರುತ್ತಾಳೆ. ಈ ರೋಬೊಟ್ ಸಹಿತ ಚಂದ್ರಯಾನ್ -3 ಯಶಸ್ವಿಯಾದರೆ ಇಸ್ರೊದ ಹೆಗ್ಗಳಿಕೆ ಜಗತ್ತಿನ ಮುಂದೆ ಮತ್ತಷ್ಟು ಹೆಚ್ಚಲಿದೆ.

Join Whatsapp