ಕೊರೋನ ಸಂಕಷ್ಟ | ಶೇ.80ರಷ್ಟು ಕ್ಯಾನ್ಸರ್ ರೋಗಿಗಳ ರೋಗ ಉಲ್ಬಣ

Prasthutha|

ಮಂಗಳೂರು : ಕೊರೋನ ಸೋಂಕಿನ ಅಬ್ಬರದ ನಡುವೆ, ಇತರ ರೋಗಿಗಳು ಈಗ ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್ ರೋಗಿಗಳು ಗುಣಮುಖರಾಗುವ ಸಾಧ್ಯತೆಯಿದ್ದರೂ, ಹೆಚ್ಚಿನ ಅಪಾಯಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಮಂಗಳೂರಿನ ಇನ್ಸ್ ಟಿಟ್ಯೂಟ್ ಆಫ್ ಅಂಕಾಲಜಿಯ ನಿರ್ದೇಶಕ ಹಾಗೂ ಕ್ಯಾನ್ಸರ್ ತಜ್ಞ ಡಾ. ಸುರೇಶ್ ರಾವ್ ಮಾಹಿತಿ ನೀಡಿದ್ದಾರೆ.

ಇವರನ್ನೆಲ್ಲ ಶೇ. 100ರಷ್ಟು ಗುಣಪಡಿಸಲು ಸಾಧ್ಯವಿತ್ತು, ಆದರೆ ಇವರಲ್ಲಿ ಕೆಲವು ಜನರು ಈಗ ಏನೂ ಮಾಡಲು ಆಗದ ಸ್ಥಿತಿ ತಲುಪಿದ್ದಾರೆ. ಹಲವರು ಮೂರು ಅಥವಾ ನಾಲ್ಕನೇ ಸ್ಟೇಜ್ ಗೆ ಬಂದಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -

“ಕ್ಯಾನ್ಸರ್ ಗೆ ನೀವು ಎಷ್ಟು ಬೇಗ ವೈದ್ಯರ ಹತ್ತಿರ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತೀರಿ ಅಷ್ಟು ಒಳ್ಳೆಯದು. ಕೋವಿಡ್ ನ ಭಯದಿಂದ ಹಲವರು ಕ್ಯಾನ್ಸರ್ ಲಕ್ಷಣಗಳು ಇದ್ದರೂ ವೈದ್ಯರ ಬಳಿ ಹೋಗಿಲ್ಲ. ಅರ್ಧ ಚಿಕಿತ್ಸೆ ಪಡೆದವರೂ ಪೂರ್ಣ ಚಿಕಿತ್ಸೆಗೆ ಬರುತ್ತಿರುವ ಶೇ. 80ರಷ್ಟು ರೋಗಿಗಳಲ್ಲಿ ಕ್ಯಾನ್ಸರ್ ಉಲ್ಬಣಿಸಿದೆ ಎಂದು ಅವರು ತಿಳಿಸಿದ್ದಾರೆ.

“ಒಬ್ಬ ಮಹಿಳೆಗೆ ನಾಲ್ಕು ತಿಂಗಳ ಹಿಂದೆ ಗರ್ಭಕೋಶದಲ್ಲಿ ಬ್ಲೀಡಿಂಗ್ ಇತ್ತು. ಕೊರೋನಾಗೆ ಹೆದರಿ ಅವರು ಆಸ್ಪತ್ರೆಗೆ ಆಗಮಿಸಲಿಲ್ಲ. ಮೊನ್ನೆ ಲಾಕ್ ಡೌನ್ ಮುಗಿದು ಬಂದಿದ್ದರು. ಆಗ ತಪಾಸಣೆ ಮಾಡಿದಾಗ, ಅವರಿಗೆ ರೋಗ ನಾಲ್ಕನೇ ಹಂತಕ್ಕೆ ತಲುಪಿದೆ. ಹೀಗೆ ಆಗುವುದಕ್ಕೆ ಯಾರು ಹೊಣೆ? ಲಾಕ್ ಡೌನ್ ವೇಳೆ ತುರ್ತು ಚಿಕಿತ್ಸೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು. ಜನರೂ ಭಯಬಿಟ್ಟು ಆಸ್ಪತ್ರೆಗೆ ಬರಬೇಕಿತ್ತು. ನಾವು ಎಲ್ಲಾ ಕಾಲದಲ್ಲೂ ಚಿಕಿತ್ಸೆಗೆ ಸಿದ್ಧರಾಗಿದ್ದೆವು ಎಂದು ಅವರು ಹೇಳಿದ್ದಾರೆ.

ಚಿಕ್ಕಮಗಳೂರು, ಉತ್ತರ ಕನ್ನಡ, ಹಾವೇರಿ ಹೀಗೆ ರಾಜ್ಯದ ನಾನಾ ಭಾಗಗಳಿಂದ ದುಬಾರಿ ಬಾಡಿಗೆ ನೀಡಿ, ವಾಹನ ಮಾಡಿಕೊಂಡು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಅವರಲ್ಲಿ ಶೇ.80ರಷ್ಟು ಜನಕ್ಕೆ ಕ್ಯಾನ್ಸರ್ ಗುಣಪಡಿಸಲಾಗದ ಸ್ಥಿತಿ ತಲುಪಿದೆ. ಕ್ಯಾನ್ಸರ್ ರೋಗಿಗಳು ತಡವಾಗಿ ಆಸ್ಪತ್ರೆಗೆ ಬಂದರೆ, ಚಿಕಿತ್ಸೆ ಕಷ್ಟ. ಚಿಕಿತ್ಸೆ ನೀಡಿದರೂ ಅಡ್ಡ ಪರಿಣಾಮ ಹೆಚ್ಚು. ಗುಣವಾಗುವುದು ಕಡಿಮೆ. ಇದರಿಂದ ಮತ್ತಷ್ಟು ಆರ್ಥಿಕ ನಷ್ಟ ಎಂದು ಡಾ. ಸುರೇಶ್ ರಾವ್ ತಿಳಿಸಿದ್ದಾರೆ.

- Advertisement -