ಕೊರೊನಾ ಸಂಕಷ್ಟ | ಅಡಕತ್ತರಿಯಲ್ಲಿ ಸಿಲುಕಿದ ಖಾಸಗಿ ಶಾಲಾ ಶಿಕ್ಷಕರ ಬದುಕು

Prasthutha|

ಬೆಂಗಳೂರು : ನಮ್ಮಲ್ಲಿ ಖಾಸಗಿ ಶಿಕ್ಷಣ ವ್ಯವಸ್ಥೆಯನ್ನು ಹೊಗಳುವ ಮತ್ತು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಹೀಗಳೆಯುವ ದೊಡ್ಡ ಬಳಗವೇ ಇದೆ. ಅದರಲ್ಲಿ, ಸಾಕಷ್ಟು ಜನ ಶಿಕ್ಷಕರೇ ಮುಂಚೂಣಿಯಲ್ಲಿರುತ್ತಾರೆ. ಮುಖ್ಯವಾಗಿ, ಸರ್ಕಾರಿ ವ್ಯವಸ್ಥೆಯನ್ನು ದ್ವೇಷಿಸುವ ಮನೋಸ್ಥಿತಿ ಇವರೊಳಗೆ ಗಾಢವಾಗಿ ನೆಲೆಯೂರಿಸಲಾಗಿರುತ್ತದೆ. ಆದರೆ, ಈಗ ಕೋವಿಡ್ ಸಂಕಷ್ಟದ ಸಮಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿದ್ದವರ ಪರಿಸ್ಥಿತಿ ನೆನೆದರೆ, ಅಯ್ಯೋ ಎನಿಸುವ ಸ್ಥಿತಿಯಲ್ಲಿದೆ.

- Advertisement -

ಒಂದು ಕಡೆ ಶಾಲೆ ಆರಂಭವಾಗದೆ ಮನೆಯಲ್ಲೇ ಉಳಿಯುವ ಸ್ಥಿತಿಯಾದರೆ, ಇನ್ನೊಂದೆಡೆ ಕೆಲವು ತಿಂಗಳುಗಳಿಂದ ವೇತನವೂ ಇಲ್ಲದೆ, ಜೀವನಾವಶ್ಯಕತೆ ಪೂರೈಸಿಕೊಳ್ಳಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರ ಸ್ಥಿತಿಯೂ ಇದೇ ಆಗಿದೆ. ಇದನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಖಾಸಗಿ ಶಾಲಾ ಶಿಕ್ಷಕರು ಮತ್ತು ಕಾಲೇಜು ಉಪನ್ಯಾಸಕರು, ಸರ್ಕಾರಿ ಶಾಲಾ ಅತಿಥಿ ಶಿಕ್ಷಕರು ಮತ್ತು ಕಾಲೇಜು ಅತಿಥಿ ಉಪನ್ಯಾಸಕರು ಈಗ ತಮ್ಮ ಕಷ್ಟವನ್ನು ಯಾರಲ್ಲಿ ಹೇಳಿಕೊಳ್ಳುವುದು ಎಂದು ಅರ್ಥವಾಗದೆ, ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ.

ಲಾಕ್ ಡೌನ್ ನಂತರ ನಮಗೆ ವೇತನ ಸಿಕ್ಕಿಲ್ಲ. ಬೋಧನೆ ಬಿಟ್ಟರೆ ನಮಗೆ ಬೇರೆ ಕೆಲಸ ಗೊತ್ತಿಲ್ಲ. ಮತ್ತೊಂದು ಆದಾಯದ ಮೂಲವೂ ಇಲ್ಲ. ಮನೆ ಬಾಡಿಗೆ ಕಟ್ಟಲೂ ಆಗುತ್ತಿಲ್ಲ. ಆಡಳಿತ ಮಂಡಳಿಗೂ ನಾವು ಬೇಡವಾಗಿದ್ದೇವೆ. ನಮ್ಮ ಶಾಲೆಗಳು ಮುಚ್ಚಿದಾಗಿನಿಂದ ಕೆಲಸ-ವೇತನವಿಲ್ಲದೆ ಬೀದಿಗೆ ಬಿದ್ದಿದ್ದೇವೆ ಎಂದು ಶಿಕ್ಷಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

- Advertisement -

ಆಡಳಿತ ಮಂಡಳಿ ಮತ್ತು ಸರ್ಕಾರದ ನಡುವೆ ಶುಲ್ಕ ಪಾವತಿಯ ವಿಷಯದಲ್ಲಿ ತಿಕ್ಕಾಟವಿದೆ. ಶುಲ್ಕ ಕಟ್ಟಲು ಒತ್ತಾಯ ಮಾಡಬೇಡಿ ಎಂದು ಸರ್ಕಾರ ಆರಂಭದಲ್ಲಿ ಹೇಳಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಸಾಕಷ್ಟು ಹೆತ್ತವರೂ ಶುಲ್ಕ ಕಟ್ಟಿಲ್ಲ. ಹೀಗಾಗಿ ತಮ್ಮ ಶಿಕ್ಷಕರಿಗೆ ವೇತನ ನೀಡಲು ಶಾಲಾಡಳಿತವೂ ಮುಂದಾಗುತ್ತಿಲ್ಲ.

ಲಾಕ್ ಡೌನ್ ವೇಳೆ ಸಾಕಷ್ಟು ವಲಯದ ಕಾರ್ಮಿಕರು, ನೌಕರರಿಗೆ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸಿತ್ತು. ಆದರೆ, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು, ಖಾಸಗಿ ಶಾಲಾ ಶಿಕ್ಷಕರು, ಉಪನ್ಯಾಸಕರಿಗೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ. ಖಾಸಗಿ ಶಾಲೆಗಳಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಈ ಶಿಕ್ಷಕರು, ಉಪನ್ಯಾಸಕರು ದುಡಿಯುತ್ತಿದ್ದರು. ಈಗ ಅದೂ ಇಲ್ಲದೆ, ಬೇರೆ ಉಳಿತಾಯವೂ ಇಲ್ಲದೆ, ಆದಾಯದ ಮೂಲವೂ ಇಲ್ಲದೆ ಇವರು ಜೀವನ ಸಾಗಿಸುವುದಾದರೂ ಹೇಗೆ? ಇವರಲ್ಲಿ ಅದೆಷ್ಟೋ ಮಂದಿ ಇದೇ ಆದಾಯವನ್ನು ನಂಬಿ ಬದುಕುವವರಿದ್ದಾರೆ. ಮನೆ ಬಾಡಿಗೆ, ದೈನಂದಿನ ಖರ್ಚು ಎಲ್ಲ ಭರಿಸಬೇಕಾಗಿತ್ತು. ಆದರೆ, ಈಗ ಅದ್ಯಾವುದೂ ಇಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದಕ್ಕೆ ಅವರುಗಳು ಪಶ್ಚಾತ್ತಾಪ ಪಡುವಂತಾಗಿದೆ.  

ಇನ್ನು ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವವರ ಕಷ್ಟವೂ ಇದಕ್ಕಿಂತ ಭಿನ್ನವಾಗಿಲ್ಲ. ಇವರಿಗೆ ಮೊದಲೇ ಪ್ರತಿ ತಿಂಗಳು ಕಾಲಕ್ಕೆ ಸರಿಯಾಗಿ ವೇತನವಾಗುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ಈಗ ವೇತನವೇ ದೊರೆತಿಲ್ಲ. ಸರ್ಕಾರದ ಸ್ಥಿತಿಯೇ ಹೀಗಿರಬೇಕಾದರೆ, ಖಾಸಗಿಯವರ ಅವ್ಯವಸ್ಥೆ ಇನ್ನೆಷ್ಟಿರಬೇಡ ಎಂದು ಕೆಲವರು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 20,000 ಖಾಸಗಿ ಶಾಲೆಗಳಿದ್ದು, ಅದರಲ್ಲಿ 2.50 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಖಾಸಗಿ ಕಾಲೇಜುಗಳಲ್ಲೂ ಲಕ್ಷಾಂತರ ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.

ಹಲವಾರು ಶಾಲೆಗಳ ಖಾತೆಗಳಲ್ಲಿ ಹಣವೇ ಇಲ್ಲ. ಇದ್ದ ಹಣವನ್ನು ಶಾಲಾಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ಈಗ ಹಣವೇ ಇಲ್ಲದೆ, ಶಾಲೆಯೇ ಮುಚ್ಚುವ ಸ್ಥಿತಿಯಿದೆ. ಹಣವಿಲ್ಲದೆ, ಶಿಕ್ಷಕರಿಗೆ ವೇತನ ಹೇಗೆ ನೀಡುವುದು ಎಂದು ಶಾಲಾಡಳಿತ ಮಂಡಳಿಗಳೂ ಕೈಚೆಲ್ಲಿ ಕೂತಿವೆ.

ಹೀಗಾಗಿ ಈಗ ಶಿಕ್ಷಕರು ತಮ್ಮ ಉಳಿವಿಗಾಗಿ ಸರಕಾರದ ಮೊರೆ ಹೋಗಿದ್ದಾರೆ. ಖಾಸಗಿ ಶಾಲಾ ಶಿಕ್ಷಕರ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಆರ್ ಟಿಇ ಮರುಪಾವತಿ ಹಣ ಸಂಸ್ಥೆಗಳಿಗೆ ಕೂಡಲೇ ಪಾವತಿಸಬೇಕು. ಬ್ಯಾಂಕ್ ಗಳಿಂದ ಸಾಲಸೌಲಭ್ಯ ಒದಗಿಸಬೇಕು. ಕೆಲಸದಿಂದ ತೆಗೆಯದಂತೆ ಆದೇಶಿಸಬೇಕು. ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಮುಂತಾದ ಬೇಡಿಕೆಗಳು ಖಾಸಗಿ ಶಾಲಾ ಶಿಕ್ಷಕರ ವಲಯದಿಂದ ಕೇಳಿಬರುತ್ತಿದೆ.

ಈ ನಡುವೆ, ಯಾವ ರೀತಿ ಸಮಸ್ಯೆ ಪರಿಹರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮೂರು-ನಾಲ್ಕು ದಿನಗಳಲ್ಲಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

Join Whatsapp