ಎಲ್ಗಾರ್ ಪರಿಷದ್ ಪ್ರಕರಣ | ದೆಹಲಿ ವಿವಿ ಪ್ರಾಧ್ಯಾಪಕ ಹನಿ ಬಾಬು ಬಂಧನ

Prasthutha|

ಮುಂಬೈ : 2017ರ ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಹನಿ ಬಾಬು ಎಂ.ಟಿ. ಅವರನ್ನು ವಶಕ್ಕೆ ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇದು 12ನೇ ಬಂಧನವಾಗಿದ್ದು, ಬಾಬು ಅವರನ್ನು ಮೂರನೇ ಬಾರಿ ವಶಕ್ಕೆ ಪಡೆಯಲಾಗಿದೆ.

- Advertisement -

ಮುಂಬೈಯಲ್ಲಿ ಮೂರು ದಿನಗಳ ವಿಚಾರಣೆಯ ಬಳಿಕ ವಿವಿಯ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಬಾಬು ಅವರನ್ನು ಬಂಧಿಸಲಾಗಿದೆ. ಹನಿ ಬಾಬು ಅವರು ನಕ್ಸಲ್ ಚಟುವಟಿಕೆ ಮತ್ತು ಮಾವೊವಾದಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು ಮತ್ತು ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾದ ಇತರರೊಂದಿಗೆ ಸಹ ಸಂಚುಕೋರರು ಎಂದು ಎನ್ ಐ ಎ ಆಪಾದಿಸಿದೆ. ಕಳೆದ ವಾರ ಬಾಬು ಅವರಿಗೆ ಎನ್ ಐಎ ಸಮನ್ಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮರುದಿನವೇ ಅವರು ವಿಚಾರಣೆಗೆ ಹಾಜರಾಗಿದ್ದರು.

ಬಾಬು ಅವರ ಬಂಧನ ಹಾಸ್ಯಾಸ್ಪದ ಎಂದು ಅವರ ಪತ್ನಿ, ದೆಹಲಿ ವಿವಿಯ ಮರಿಂಡಾ ಹೌಸ್ ನಲ್ಲಿ ಪ್ರಾಧ್ಯಾಪಕಿಯಾಗಿರುವ ಜೆನ್ನಿ ರೊವೆನಾ ಹೇಳಿದ್ದಾರೆ. “ಬೆಳಗ್ಗೆ 5 ಗಂಟೆಗೆ ಕೆಲವು ಅಧಿಕಾರಿಗಳು ನನಗೆ ಫೋನ್ ಕರೆ ಮಾಡಿ, ಹನಿ ಬಾಬು ಅವರನ್ನು ಬಂಧಿಸಲಾಗಿದೆ ಎಂದರು. ನಾನು ಅವರೊಂದಿಗೆ ಮಾತನಾಡಲು ಕೇಳಿದಾಗ, ಅವರು ಅದಕ್ಕೆ ನಿರಾಕರಿಸಿದರು. ಈ ಬಂಧನ ಹಾಸ್ಯಾಸ್ಪದ’’ ಎಂದು ಜೆನ್ನಿ ಹೇಳಿದ್ದಾರೆ. ಪ್ರಕರಣದಲ್ಲಿ ಬಾಬು ಪಾತ್ರವಿರುವುದಕ್ಕೆ ಸಾಕ್ಷಿಯಿದೆ ಎಂದು ಎನ್ ಐ ಎ ಪ್ರತಿಪಾದಿಸಿದೆ.

Join Whatsapp