ಲಕ್ನೋ: ಮಂಟಪದಲ್ಲಿ ತಲೆಯಿಂದ ವಿಗ್ ಕೆಳಗೆ ಬಿದ್ದು, ವರನ ಕೂದಲಿನ ಬಂಡವಾಳ ಬಯಲಾದುದನ್ನು ಕಂಡು ವಧು ಬೇಸರ ವ್ಯಕ್ತಪಡಿಸಿ ಮದುವೆಯನ್ನು ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.
ವರ ತನ್ನದು ಬೋಳು ತಲೆ ಎಂಬ ವಿಷಯವನ್ನು ವಧುವಿನ ಕುಟುಂಬಸ್ಥರೊಂದಿಗೆ ಮುಚ್ಚಿಟ್ಟಿದ್ದಾನೆ. ಮದುವೆ ಆಗುವವರೆಗೆ ಈ ವಿಷಯ ಅವರಿಗೆ ತಿಳಿಯಬಾರದೆಂದು ಬಹಳ ಜಾಗರೂಕತೆಯಿಂದ ನಡೆದುಕೊಂಡಿದ್ದಾನೆ. ಆದರೆ ಮದುವೆ ದಿನ ಮಂಟಪಕ್ಕೆ ಬರುತ್ತಿದ್ದ ವೇಳೆ ವರ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಬಿದ್ದಿದ್ದಾನೆ. ಈ ವೇಳೆ ಆತನ ತಲೆಯಲ್ಲಿದ್ದ ವಿಗ್ ಕಳಚಿ ಬಿದ್ದು ಬೋಳು ತಲೆ ಕಾಣಿಸಿದೆ. ಇದರಿಂದ ವಧು ಹಾಗೂ ಆಕೆಯ ಕಡೆಯವರಿಗೆ ಅಚ್ಚರಿಯಾಗಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಬೋಳುತಲೆಯ ವರನನ್ನು ತಾನು ಮದುವೆಯಾಗುವುದಿಲ್ಲ ಎಂದು ವಧು ನಿರಾಕರಿಸಿದ್ದಾಳೆ. ಕೊನೆಗೆ ಮದುವೆಯೇ ನಿಂತು ಹೋಗಿದೆ.
ಈ ಮದುವೆಗಾಗಿ ವಧುವಿನ ಕಡೆಯವರು 5.66 ಲಕ್ಷ ರೂ. ಖರ್ಚು ಮಾಡಿದ್ದರು. ನಷ್ಟದ ಮೊತ್ತವನ್ನು ವರನ ಕುಟುಂಬದವರು ಹಿಂದಿರುಗಿಸಿದ್ದಾರೆ.