Home ಟಾಪ್ ಸುದ್ದಿಗಳು ಸಿಜೆಐ ಮನೆಯ ಗಣಪತಿ ಪೂಜೆಯಲ್ಲಿ ಮೋದಿ: ನಮಗೆ ನ್ಯಾಯ ಸಿಗುತ್ತದೆಯೇ ಎಂದ ಸಂಜಯ್ ರಾವುತ್

ಸಿಜೆಐ ಮನೆಯ ಗಣಪತಿ ಪೂಜೆಯಲ್ಲಿ ಮೋದಿ: ನಮಗೆ ನ್ಯಾಯ ಸಿಗುತ್ತದೆಯೇ ಎಂದ ಸಂಜಯ್ ರಾವುತ್

ನವದೆಹಲಿ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಮನೆಯ ಗಣಪತಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕುರಿತಂತೆ ಪ್ರತಿಕ್ರಿಯಿಸಿರುವ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್, ಸಿಜೆಐ ನಮ್ಮ ಪಕ್ಷದ ಪ್ರಕರಣದಲ್ಲಿ ನ್ಯಾಯಸಮ್ಮತವಾಗಿ ತೀರ್ಪು ನೀಡುವರೇ ಎಂದು ಪ್ರಶ್ನಿಸಿದ್ದಾರೆ.


ಎಎನ್ಐ ಜೊತೆ ಮಾತನಾಡಿರುವ ರಾವುತ್, ‘ಗಣಪತಿ ಪೂಜೆ ಎಲ್ಲೆಡೆ ನಡೆಯುತ್ತಿದೆ. ಜನರು ಪರಸ್ಪರರ ಮನೆಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಎಷ್ಟು ಮನೆಗಳಿಗೆ ಭೇಟಿ ನೀಡಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅವರು ಸಿಜೆಐ ಮನೆಗೆ ಮಾತ್ರ ಭೇಟಿ ನೀಡಿದ್ದು, ಇಬ್ಬರು ಒಟ್ಟಿಗೆ ಆರತಿ ಮಾಡಿದ್ದಾರೆ’ಎಂದು ರಾವುತ್ ವ್ಯಂಗ್ಯ ಮಾಡಿದ್ದಾರೆ.


ಸಂವಿಧಾನದ ಪಾಲಕರನ್ನು ರಾಜಕಾರಣಿ ಭೇಟಿಯಾದಾಗ ಜನರ ಮನದಲ್ಲಿ ಸಂಶಯ ಮೂಡುತ್ತದೆ ಎಂದು ರಾವುತ್ ಹೇಳಿದ್ದಾರೆ.


‘ನಮ್ಮ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಪ್ರತಿವಾದಿಯಾಗಿದೆ. ಮುಖ್ಯ ನ್ಯಾಯಮಾರ್ತಿಗಳು ಈ ಪ್ರಕರಣದಿಂದ ದೂರವಿರಬೇಕು. ಏಕೆಂದರೆ, ಪ್ರಕರಣದ ಪ್ರತಿವಾದಿಯ ಜೊತೆ ಅವರ ನಂಟು ಬಹಿರಂಗವಾಗಿ ಗೋಚರಿಸುತ್ತಿದೆ’ಎಂದು ರಾವುತ್ ಹೇಳಿದ್ದಾರೆ.


ಈ ಪ್ರಕರಣದಲ್ಲಿ ನಮಗೆ ಸಿಜೆಐ ನ್ಯಾಯ ನೀಡಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.


‘ನಮ್ಮ ಪ್ರಕರಣವನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಸರ್ಕಾರ ನಡೆಯುತ್ತಿದೆ ಶಿವಸೇನೆ ಮತ್ತು ಎನ್ಸಿಪಿ ತತ್ತರಿಸುತ್ತಿವೆ. ನಮಗೆ ನ್ಯಾಯ ಸಿಗುತ್ತಿಲ್ಲ. ಮಹಾರಾಷ್ಟ್ರದ ಅಕ್ರಮ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ’ಎಂದು ಕಿಡಿಕಾರದ್ದಾರೆ.

Join Whatsapp
Exit mobile version