Home ಟಾಪ್ ಸುದ್ದಿಗಳು ಬಂಟ್ವಾಳ: ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ಹೆದ್ದಾರಿ ತಡೆದು SDPI ಪ್ರತಿಭಟನೆ

ಬಂಟ್ವಾಳ: ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ಹೆದ್ದಾರಿ ತಡೆದು SDPI ಪ್ರತಿಭಟನೆ

ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ವಿಳಂಬದ ವಿರುದ್ಧ ನಾರಾಯಣ ಗುರು ಸರ್ಕಲ್ ಬಿ ಸಿ ರೋಡಿನಲ್ಲಿ ಬೃಹತ್ ಪ್ರತಿಭಟನೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಎಸ್ ಎಚ್ ನೇತೃತ್ವದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ “ಜನರು ಸಂಚರಿಸಲು ಸಮಸ್ಯೆಯಾಗುತ್ತಿದ್ದು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ಮೌನವಾಗಿ ಉಳಿಯುವ ಬದಲು ಈ ಅವ್ಯವಸ್ಥೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕೆಂದರು.”

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಎಸ್ ಮಾತನಾಡಿ “ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ಹೊಂದುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಹೆದ್ದಾರಿ ಪ್ರಾಧಿಕಾರ ಕಡೆಗಣಿಸುತ್ತಿದೆ, ಲಕ್ಷಾಂತರ ರೂಪಾಯಿ ತೆರಿಗೆಯ ರೂಪದಲ್ಲಿ ಪಡೆಯುವ ಸರ್ಕಾರ ಸಮರ್ಪಕವಾದ ರಸ್ತೆಯನ್ನು ಕೊಡಲು ವಿಫಲವಾಗಿದೆ” ಎಂದರು.

ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ ಬಂಟ್ವಾಳ ಪುರಸಭೆಯ ಉಪಾಧ್ಯಕ್ಷ ಮೂನಿಷ್ ಆಲಿ ಮಾತನಾಡಿ “ರಸ್ತೆ ಕಾಮಗಾರಿ ಮಾಡುವಾಗ ಕೆಲವೊಂದು ಮಾನದಂಡಗಳನ್ನು ಪಾಲಿಸಬೇಕು, ಅದರಲ್ಲಿ ಮುಖ್ಯವಾಗಿ ವಾಹನ ಸುಗಮ ಸಂಚಾರಕ್ಕೆ ಸರ್ವಿಸ್ ರಸ್ತೆ ಮಾಡದೇ ಜನರನ್ನು ವಂಚಿಸುತ್ತಿದೆ. ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಟೆಂಡರ್ ತೆಗೆಯುವ ಜನರ ಹಿಂದಿನ ಕೆಲಸ ಕಾರ್ಯಗಳ ಬಗ್ಗೆ ನೋಡುವ ಬದಲಿಗೆ, ಅವರ ಪಕ್ಷ ಮತ್ತು ಕುಟುಂಬದ ಹಿನ್ನೆಲೆಯನ್ನು ತಿಳಿದು ಬಿಜೆಪಿ ಸರ್ಕಾರ ಟೆಂಡರ್ ನೀಡುತ್ತಿರುವುದು ನಾಚಿಕೆಯ ಸಂಗತಿಯಾಗಿದೆ. ನಮ್ಮ ಜಿಲ್ಲೆಗೆ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗಳು ಭೇಟಿ ಕೊಡುವುದಾದರೆ ಕೂಡಲೇ ಎಚ್ಚೆತ್ತು ಕೊಳ್ಳುವ ಹೆದ್ದಾರಿ ಪ್ರಾಧಿಕಾರ ರಾತ್ರಿ ಬೆಳಗಾಗುವುದರೊಳಗೆ ರಸ್ತೆಯ ಹೊಂಡಗಳನ್ನು ಸರಿ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಾಗ, ಸಾಮಾನ್ಯ ಜನರಿಗೆ ತೊಂದರೆಯಾಗುವಾಗ ಯಾಕೆ ಸರಿಪಡಿಸಲಾಗುವುದಿಲ್ಲ” ಎಂದು ಟೀಕಿಸಿದರು.

ಮನವಿ ಸ್ವೀಕರಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಥವಾ KNR ಸಂಸ್ಥೆಯ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಮನವಿಯನ್ನು ಸ್ವೀಕರಿಸಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಲಾಯಿತು. KNR ಸಂಸ್ಥೆಯ ಇಂಜಿನಿಯರ್ ಬಂದು ಮನವಿ ಸ್ವೀಕರಿಸಿದ ನಂತರ ಸಮಾರೋಪ ಭಾಷಣ ಮಾಡಿದ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಎಸ್ ಎಚ್ “20 ದಿವಸಗಳ ಒಳಗೆ ಸರ್ವಿಸ್ ರಸ್ತೆಯನ್ನು ಡಾಮರೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಕೆ ಆಗುವವರೆಗೂ ರಸ್ತೆ ತಡೆ ಮಾಡಲಿದ್ದೇವೆ” ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ತಲಪಾಡಿ,‌ ಶಾಕೀರ್ ಅಳಕೆಮಜಲು‌, ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಮುಷ್ತಾಕ್ ತಲಪಾಡಿ,ಕೊಳ್ನಾಡು ಬ್ಲಾಕ್ ಅಧ್ಯಕ್ಷರಾದ ಕಲಂದರ್ ಪರ್ತಿಪ್ಪಾಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರ್,‌ ಕಲ್ಲಡ್ಕ ಬ್ಲಾಕ್ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ, ಸರಪಾಡಿ ಬ್ಲಾಕ್ ಅಧ್ಯಕ್ಷರಾದ ಹೈದರ್ ಕಾವಳಕಟ್ಟೆ, ಬಂಟ್ವಾಳ ಪುರಸಭಾ ಸಮಿತಿ ಉಪಾಧ್ಯಕ್ಷ ಯೂಸುಫ್ ಆಲಡ್ಕ, ಪಕ್ಷದ ಕಾರ್ಯಕರ್ತರು,‌ ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Join Whatsapp
Exit mobile version