Home ಟಾಪ್ ಸುದ್ದಿಗಳು ವೈದ್ಯರು ಕನ್ನಡದಲ್ಲೇ ಔಷಧಿ ಚೀಟಿ ಬರೆಯುವ ಕುರಿತು ಸರ್ಕಾರದಿಂದ ಮಹತ್ವದ ತೀರ್ಮಾನ!

ವೈದ್ಯರು ಕನ್ನಡದಲ್ಲೇ ಔಷಧಿ ಚೀಟಿ ಬರೆಯುವ ಕುರಿತು ಸರ್ಕಾರದಿಂದ ಮಹತ್ವದ ತೀರ್ಮಾನ!

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಯ ವೈದ್ಯರು ಕನ್ನಡದಲ್ಲೇ ರೋಗಿಗಳಿಗೆ ಔಷಧಿ ಚೀಟಿಯನ್ನು ಬರೆಯುವಂತೆ ಆದೇಶ ಮಾಡಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಪತ್ರದಲ್ಲಿ ಮನವಿ ಮಾಡಿದ್ದರು.

ಈ ಪತ್ರಕ್ಕೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.

ಪುರುಷೋತ್ತಮ ಬಿಳಿಮಲೆ ಪತ್ರಕ್ಕೆ ಉತ್ತರಿಸಿರುವ ಸಚಿವ ದಿನೇಶ್ ಗುಂಡೂರಾವ್, ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ತಾವು ಮಾಡಿರುವ ಸಲಹೆ ಅತ್ಯಂತ ಮಹತ್ವಪೂರ್ಣ ವಿಷಯ ಎನಿಸಿತು. ನೂರಾರು ವೈದ್ಯರು ತಮ್ಮ ಮಾತುಗಳಿಂದ ಪ್ರೇರಿತರಾಗಿ ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ತಮ್ಮಲ್ಲಿ ಹಂಚಿಕೊಂಡಿದ್ದಾರೆ ಎನ್ನುವುದು ಸಹ ನಿಜಕ್ಕೂ ಸಂತಸದ ಸಂಗತಿ. ಇಂಗ್ಲಿಷ್ ಭಾಷೆ ಇತರೆ ಭಾಷೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ದೈನಂದಿನ ಜೀವನದಲ್ಲಿ ಕನ್ನಡ ಭಾಷೆ ಉಳಿಯಲು, ಬೆಳೆಯಲು ಇಂತಹ ಕ್ರಮಗಳು ಪೂರಕ ಎನ್ನುವುದು ಸರ್ವವೇದ್ಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸುವ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ಸಂಗತಿಗಳು ಮಿಳಿತವಾಗಿದೆ. ವೈದ್ಯರು, ರೋಗಿಗಳು, ಶುಶೂಷಕರು, ಔಷಧಿ ವರ್ತಕರು ಮುಂತಾದ ಹತ್ತು ಹಲವು ಪ್ರಭಾ ಕೇಂದ್ರಗಳಿರುವ ಈ ವ್ಯವಸ್ಥೆಯ ಒಂದು ಕೊಂಡಿ ಸರಿಯಾಗಿ ಕನ್ನಡವನ್ನು ಅರ್ಥೈಸಿಕೊಳ್ಳುವುದರಲ್ಲಿ ಎಡವಿದರೂ ರೋಗಿಗಳ ಜೀವನ್ಮರಣದ ಪ್ರಶ್ನೆಯಾಗುವ ಸಾಧ್ಯತೆಯೂ ಇದೆ.

ಜನರ ಆರೋಗ್ಯವನ್ನು ಕಾಯುವ ವೈದ್ಯಕೀಯ ವಿಜ್ಞಾನ ಕ್ಷೇತ್ರ ಅತ್ಯಂತ ವಿಶಾಲ ಮತ್ತು ಸಂಕೀರ್ಣವಾಗಿದ್ದು, ಪ್ರಮುಖ ಬದಲಾವಣೆಗಳ ಮುನ್ನ ಎಲ್ಲ ಭಾಗಿದಾರರುಗಳ ಜೊತೆಗೆ ಪೂರ್ವಸಂವಾದ ಅಗತ್ಯ ಎನ್ನುವುದು ನನ್ನ ಭಾವನೆ. ಇದು ಕೇವಲ ಒಂದು ಆದೇಶದ ಮೂಲಕ ಜಾರಿಗೆ ಬರುವ ವಿಚಾರವಲ್ಲ ಎಂದರು.

Join Whatsapp
Exit mobile version