ಬೆಂಗಳೂರು: ಬಕ್ರೀದ್ ಆಚರಣೆ ಪ್ರಯುಕ್ತ ಬೆಂಗಳೂರಿನ ಹಲವು ಕಡೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಪರಿಣಾಮವಾಗಿ ಬೆಳಗ್ಗೆ 8 ರಿಂದ 11.30ರವರೆಗೆ ಸಂಚಾರ ವ್ಯತ್ಯಯ ಇರಲಿದೆ. ಪರ್ಯಾಯ ಮಾರ್ಗಗಳ ಕುರಿತಾದ ವಿವರವನ್ನೂ ಬೆಂಗಳೂರು ಸಂಚಾರ ಪೊಲೀಸರು ನೀಡಿದ್ದಾರೆ.
ಗುರುವಾರ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆ ಇದೆ. ಹೀಗಾಗಿ, ಸಂಚಾರ ಪೊಲೀಸ್ ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ ಸಂಚಾರ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಂಚಾರ ಬದಲಾವಣೆ?
ಬಸವೇಶ್ವರ ವೃತ್ತದಿಂದ ಸಿಐಡಿ ಜಂಕ್ಷನ್‌ವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿರುವುದರಿಂದ ಪ್ರಯಾಣಿಕರು ದೇವರಾಜ ಅರಸು ರಸ್ತೆಯನ್ನು ಬಳಸಲು ಕೋರಲಾಗಿದೆ.
ಲಾಲ್‌ಬಾಗ್ ಮುಖ್ಯ ಗೇಟ್‌ನಿಂದ ಕಣ್ಣಪ್ಪ ಪೆಟ್ರೋಲ್ ಬಂಕ್‌ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪ್ರಯಾಣಿಕರು ಊರ್ವಶಿ, ಸಿದ್ದಯ್ಯ ರಸ್ತೆ, 34ನೇ ಜಂಕ್ಷನ್, ವಿಲ್ಸನ್ ಗಾರ್ಡನ್ ಮುಖ್ಯರಸ್ತೆ ಮತ್ತು ಹೊಸೂರು ರಸ್ತೆಯನ್ನು ಬಳಸಲು ಸೂಚಿಸಲಾಗಿದೆ.
ಟೋಲ್ ಗೇಟ್ ಜಂಕ್ಷನ್‌ನಿಂದ ಶಿರಸಿ ವೃತ್ತದವರೆಗೆ ಸಂಚಾರ ನಿರ್ಬಂಧಿಸಿರುವುದರಿಂದ ಸಿರ್ಸಿ ವೃತ್ತದಿಂದ ಬಲ ತಿರುವು ಪಡೆದು ಬಿನ್ನಿ ಮಿಲ್, ಟ್ಯಾಂಕ್ ಬಂಡ್ ರಸ್ತೆ, ಮಾಗಡಿ ರಸ್ತೆ ಮತ್ತು ವಿಜಯನಗರ ಮಾರ್ಗವಾಗಿ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಮೈಸೂರು ರಸ್ತೆಯಿಂದ ಸಿಟಿ ಮಾರ್ಕೆಟ್ ಕಡೆಗೆ ಪ್ರಯಾಣಿಸುವವರು ಕಿಮ್ಕೋ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ವಿಜಯನಗರ, ಮಾಗಡಿ ಮುಖ್ಯರಸ್ತೆ ಮತ್ತು ಸಿರ್ಸಿ ವೃತ್ತದ ಮೂಲಕ ಮಾರುಕಟ್ಟೆಗೆ ತೆರಳಬಹುದಾಗಿದೆ.