Home ಟಾಪ್ ಸುದ್ದಿಗಳು ತ್ರಿಪುರಾ: ರಥೋತ್ಸವದ ವೇಳೆ ತಗುಲಿದ ಹೈಟೆನ್ಷನ್ ತಂತಿ, 7 ಮಂದಿ ಸಾವು

ತ್ರಿಪುರಾ: ರಥೋತ್ಸವದ ವೇಳೆ ತಗುಲಿದ ಹೈಟೆನ್ಷನ್ ತಂತಿ, 7 ಮಂದಿ ಸಾವು

ಅಗರ್ತಲ: ತ್ರಿಪುರಾದ ಕುಮಾರ್‌ಘಾಟ್ ಪಟ್ಟಣದ ಉನಕೋಟಿಯಲ್ಲಿ ರಥೋತ್ಸವದ ವೇಳೆ ರಥಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ರಥ ಯಾತ್ರೆ ಉತ್ಸವದ ಸಂದರ್ಭದಲ್ಲಿ, ಕುಮಾರ್‌ಘಾಟ್ ಪ್ರದೇಶದಲ್ಲಿ ಸಂಜೆ 4.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈಟೆನ್ಷನ್ ತಂತಿ ತಗುಲಿ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಪ್ರಾಣಹಾನಿಗೆ ಸಂತಾಪ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಅವರ ಜೊತೆ ನಿಂತಿದೆ ಎಂದು ಸಹಾ ಹೇಳಿದ್ದಾರೆ.

ಹೈಟೆನ್ಷನ್ ತಂತಿ ತಗುಲಿದಾಗ ಸಾವಿರಾರು ಜನರು ರಥವನ್ನು ಎಳೆಯುತ್ತಿದ್ದರು. ಎಲ್ಲಾ ಗಾಯಾಳುಗಳಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಜ್ಯೋತಿಷ್ಮನ್ ದಾಸ್ ಚೌಧರಿ ತಿಳಿಸಿದ್ದಾರೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಸುಟ್ಟಗಾಯಗಳಾಗಿರುವ ಇಬ್ಬರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದರ ನಂತರ, 10-12 ಜನರನ್ನು ಆಸ್ಪತ್ರೆಗೆ ಕರೆತರಲಾಯಿತು. ಆ ಪೈಕಿ ಇಬ್ಬರು ಮಕ್ಕಳು ಸೇರಿದಂತೆ 7 ಮಂದಿ ಮೃತಪಟ್ಟರು. 6-7 ಜನರಿಗೆ ಸುಟ್ಟ ಗಾಯಗಳಾಗಿವೆ. ಇನ್ನು ಆರು ಮಂದಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಮಾರ್‌ಘಾಟ್ ಉಪವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಸಂಜಿತ್ ಚಕ್ಮಾ ತಿಳಿಸಿದ್ದಾರೆ.

Join Whatsapp
Exit mobile version