ಮುಂಬೈ: ಕೋಪದ ಭರದಲ್ಲಿ ಮಗ ಹೆತ್ತ ತಾಯಿಗೆನೇ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ. ಊಟ ಬಡಿಸುವ ವಿಚಾರದಲ್ಲಿ ತನ್ನ ತಾಯಿಯೊಂದಿಗೆ ಜಗಳವಾಡಿದ ಮಗ ಈ ದುಷ್ಕೃತ್ಯ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಮಗನ ರಾಕ್ಷಸ ಕೃತ್ಯದಿಂದಾಗಿ ದೇಹದಾದ್ಯಂತ ಗಂಭೀರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಹಿಳೆ ಇಂದು ಅಲಿಬಾಗ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಗನಿಂದಲೆ ಸಾವನ್ನಪ್ಪಿದ ಹತಭಾಗ್ಯ ತಾಯಿಯನ್ನು ಚಂಗುನಾ ನಾಮದೇ ಖೋಟ್ ಎಂದು ಗುರುತಿಸಲಾಗಿದೆ.
ಊಟ ತಯಾರಿಸಿ ಬಡಿಸುವ ವಿಚಾರದಲ್ಲಿ ಜಗಳವಾಡಿದ ಮಗ ಜಯೇಶ್ ಆಕೆಯನ್ನು ಥಳಿಸಿದ್ದಾನೆ. ಕೋಪದ ಭರದಲ್ಲಿ ಮನೆಯ ಮುಂಭಾಗದ ತೆರೆದ ಜಾಗಕ್ಕೆ ತಾಯಿಯನ್ನು ಎಳೆದೊಯ್ದು ಒಣಮರವನ್ನು ಸಂಗ್ರಹಿಸಿ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ರಾವದಂಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗಿಲ್ಲ. ತಲೆಮರೆಸಿಕೊಂಡಿದ್ದ ಜಯೇಶ್‍ನನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.