ಕಸಗುಡಿಸುವ ಕೆಲಸಕ್ಕೆ ಅರ್ಜಿ ಹಾಕಿದ 50 ಸಾವಿರ ಪದವೀಧರರು, ಸ್ನಾತಕೋತ್ತರರು !

Prasthutha|

ಚಂಡೀಗಢ: ಹರ್ಯಾಣದ ಸರಕಾರಿ ಇಲಾಖೆಗಳು, ಮಂಡಳಿಗಳು, ನಿಗಮಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿನ ಕಸ ಗುಡಿಸುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸುಮಾರು 46,000 ಮಂದಿ ಸ್ನಾತಕೋತ್ತರ ಹಾಗೂ ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

- Advertisement -


ಉನ್ನತ ಶಿಕ್ಷಣ ಪಡೆದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಸ್ವೀಪರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಹೊರಗುತ್ತಿಗೆ ಸಂಸ್ಥೆ ಹರ್ಯಾಣ ಕೌಶಲ್ ರೋಜ್ಗರ್ ನಿಗಮ್ ಲಿಮಿಟೆಡ್ (Haryana Kaushal Rozgar Nigam Limited -HKRN) ಈ ನೇಮಕಾತಿ ಜವಾಬ್ದಾರಿ ಹೊತ್ತಿದೆ.


ಹರ್ಯಾಣ ಸರಕಾರ ಹೊರಡಿಸಿರುವ ಉದ್ಯೋಗ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಮಾಸಿಕ ರೂ. 15,000 ವೇತನ ನಿಗದಿಪಡಿಸಲಾಗಿದ್ದು, ಹುದ್ದೆಗಳ ನಿರ್ದಿಷ್ಟ ಸಂಖ್ಯೆಯನ್ನು ಪ್ರಕಟಿಸಲಾಗಿಲ್ಲ. ಈ ಹುದ್ದೆಗಳಿಗೆ ಸುಮಾರು 6,000 ಸ್ನಾತಕೋತ್ತರ ಹಾಗೂ ಸುಮಾರು 40,000 ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರೊಂದಿಗೆ 12ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಸುಮಾರು 1.2 ಲಕ್ಷ ಅಭ್ಯರ್ಥಿಗಳೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

- Advertisement -


ಕಳೆದೊಂದು ತಿಂಗಳಲ್ಲಿ ಉದ್ಯೋಗವನ್ನು ಬಯಸಿ ಲಕ್ಷಾಂತರ ಅರ್ಜಿದಾರರು ಅರ್ಜಿ ಹಾಕಿದ್ದಾರೆ. ಅರ್ಜಿದಾರರು ಎಲ್ಲಾ ವರ್ಗದವರಿದ್ದಾರೆ. ಅವರಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರ ಮನೀಶ್ ಕುಮಾರ್ ಮತ್ತು ಅವರ ಪತ್ನಿ ಅರ್ಹ ಶಿಕ್ಷಕಿ ರೂಪಾ ಅವರುಗಳೂ ಇದ್ದಾರೆ.


ಖಾಸಗಿ ಸಂಸ್ಥೆಗಳು ಹಾಗೂ ಕಂಪನಿಗಳಲ್ಲಿ ಕೂಡ ನಮಗೆ ತಿಂಗಳಿಗೆ 10,000 ರೂ. ನೀಡುವುದಿಲ್ಲ. ಇಲ್ಲಿ ಸರ್ಕಾರಿ ಮಟ್ಟದಲ್ಲಿ, ಭವಿಷ್ಯದಲ್ಲಿ ನಿಯಮಿತ ಉದ್ಯೋಗದ ಭರವಸೆಯೇ ಆಶಾಕಿರಣವಾಗಿದೆ. ಜೊತೆಗೆ, ಕಸ ಗುಡಿಸುವುದು ಪೂರ್ಣ ದಿನದ ಕೆಲಸವಲ್ಲ, ಆದ್ದರಿಂದ ನಾವು ಹಗಲಿನಲ್ಲಿ ಇತರ ಕೆಲಸವನ್ನು ಮುಂದುವರಿಸಬಹುದು ಎಂದು ಮನೀಶ್ ತಮ್ಮತರ್ಕವನ್ನು ಮುಂದಿಡುತ್ತಾರೆ.


ಸಕಾರಾತ್ಮಕವಾಗಿ ಕೆಲಸ ಸಿಗುವ ಭರವಸೆಯೊಂದಿಗೆ ನಾನು ಅರ್ಜಿ ಸಲ್ಲಿಸಬಹುದಾದ ಏಕೈಕ ಕೆಲಸ ಇದಾಗಿದೆ. ನನ್ನ ಕುಟುಂಬವು ಹೆಚ್ಚಿನ ಅಧ್ಯಯನ ಅಥವಾ ತರಬೇತಿಗೆ ಹಣವನ್ನು ಖರ್ಚು ಮಾಡಲು ಸಿದ್ಧವಿಲ್ಲ. ಆದ್ದರಿಂದ ಈ ಉದ್ಯೋಗ ಈಗ ನನ್ನ ಏಕೈಕ ಆಯ್ಕೆಯಾಗಿದೆ ಎಂದು ಸುಮಿತ್ರಾ ಹೇಳಿದ್ದಾರೆ.


ಆದರೆ ರಾಜ್ಯದಲ್ಲಿನ ಈ ಪರಿಸ್ಥಿತಿ ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ನಿರುದ್ಯೋಗ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಹರ್ಯಾಣ ಕಾಂಗ್ರೆಸ್ ಆರೋಪಿಸಿದೆ.



Join Whatsapp
Exit mobile version