Home ಟಾಪ್ ಸುದ್ದಿಗಳು ಭಯದಲ್ಲಿದ್ದ ಭಾರತ ಈಗ ಭಯಮುಕ್ತವಾಗುತ್ತಿದೆ : ಸಸಿಕಾಂತ್ ಸೆಂಥಿಲ್

ಭಯದಲ್ಲಿದ್ದ ಭಾರತ ಈಗ ಭಯಮುಕ್ತವಾಗುತ್ತಿದೆ : ಸಸಿಕಾಂತ್ ಸೆಂಥಿಲ್

ಮಂಗಳೂರಿನಲ್ಲಿ‌ ಮಾಜಿ‌ ಜಿಲ್ಲಾಧಿಕಾರಿ‌ & ಹಾಲಿ‌ ಸಂಸದರ ಜೊತೆ ಸಂವಾದ

ಮಂಗಳೂರು : ನಾನು ಜಿಲ್ಲಾಧಿಕಾರಿಯಾಗಿದ್ದಾಗ ಭಾರತದಲ್ಲಿ ಭಯ ಇತ್ತು, ಈಗ ಸಂಸದನಾಗಿರುವಾಗ ಭಯಮುಕ್ತ ಭಾರತವನ್ನು ನೋಡುತ್ತಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಮತ್ತು ತಮಿಳುನಾಡಿನ ಹಾಲಿ ಸಂಸದರಾದ ಸಸಿಕಾಂತ್‌ ಸೆಂಥಿಲ್ ಹೇಳಿದರು.

ಪ್ರಸಕ್ತ ವಿದ್ಯಮಾನಗಳು, ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯಾತೀತೆಗೆ ಎದುರಾಗಿರುವ ಅಪಾಯಗಳ ಕುರಿತು ಸಾಮರಸ್ಯ ಮಂಗಳೂರು ಇವರು ನಗರದ ಖಾಸಗಿ ಹೋಟೆಲ್‌ನಲ್ಲಿ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಮೂಲಭೂತವಾಗಿ ತುಂಬಾ ಬದಲಾವಣೆಯಾಗಿದ್ದು, ಭಯಪಡುವ ರಾಜಕೀಯ ತುಂಬಾ ದುರ್ಬಲವಾಗಿದೆ, ಮೋದಿಯವರು ಸಂಸತ್‌ನಲ್ಲಿ ಭಾಷಣಕ್ಕೆ ಎದ್ದುನಿಂತರೆ ಈ ದೇಶದಲ್ಲಿರುವ ಹಲವು ಭಾಷೆಗಳಲ್ಲಿ ವಿರೋಧದ ಘೋಷಣೆಗಳು ಕೇಳಿಬರುತ್ತಿದೆ, ಇದು ಭಯದಲ್ಲಿದ್ದ ಭಾರತ ಭಯಮುಕ್ತವಾಗಿರುವುದರ ಸಂಕೇತ ಎಂದರು.

‘ಅಯೋಧ್ಯೆಯಲ್ಲಿ ರಾಮಂದಿರ ಉದ್ಘಾಟನೆಯಾದ ಬಳಿಕ ವಿಪಕ್ಷಗಳ ಕಥೆ ಮುಗಿಯುತ್ತದೆ ಎಂದು ಬಿಜೆಪಿಯವರು ಲೋಕಸಭೆಯ ಚುನಾವಣೆಗೆ ಮುಂಚೆ ಭವಿಷ್ಯ ಹೇಳುತ್ತಿದ್ದರು, ಆದರೆ ಅಯೋಧ್ಯೆಯಲ್ಲೇ ಬಿಜೆಪಿ ಸೋತಿರುವುದು ದೇಶದ ಪುನರುಜ್ಜೀವನ ಎಂದು ಅವರು ವ್ಯಾಖ್ಯಾನಿಸಿದರು.

ಕರಾವಳಿಯ ಕೋಮುವಾದದ ಬಗ್ಗೆ ಮಾತನಾಡಿದ ಅವರು, ‘ಮಂಗಳೂರಿನಲ್ಲಿ‌ ಸಮಾಜಗಳ‌ ಮಧ್ಯೆ ಸಮಸ್ಯೆ ಇಲ್ಲ, ಇಲ್ಲಿರುವುದು ರಾಜಕೀಯ ಸಮಸ್ಯೆ, ಜನರನ್ನು ಜನರ ಮೇಲೆ ಎತ್ತಿಕಟ್ಟುವ ರಾಜಕೀಯ ನಡೆಯುತ್ತಿದೆ‌ ಎಂದರು. ಕೋಮುವಾದದ ವಿರುದ್ಧ ಎಲ್ಲರೂ ಧೈರ್ಯವಾಗಿ ಧ್ವನಿ ಎತ್ತಬೇಕೆಂದು ಕರೆಕೊಟ್ಟರು. ಕೋಮುವಾದದ ವಿರುದ್ಧ ಧ್ವನಿ ಎತ್ತುವುದು ಸಂವಿಧಾನದ ಪರವಾಗಿ ಧ್ವನಿ ಎತ್ತಿದಂತೆ ಆಗುತ್ತದೆ, ಮಂಗಳೂರಿನ ಕೋಮುವಾದದ ಕತ್ತಲೆಗೆ ನಾವು ಧ್ವನಿ ಎತ್ತುವ ಮೂಲಕ ಬೆಳಕು ನೀಡಬೇಕು ಎಂದರು. ಕೋಮುವಾದಿಗಳು ಮಾತನಾಡುವುದು ಸಮಸ್ಯೆ ಅಲ್ಲ, ನಾವು ಮೌನವಾಗಿರುವುದೇ ನಿಜವಾದ ಸಮಸ್ಯೆ ಎಂದು ಹೇಳಿದರು.

ಹಿಂದುತ್ವ ರಾಷ್ಟ್ರೀಯವಾದಿಗಳಿಗೆ ಮುಸ್ಲಿಮರು ಸಮಸ್ಯೆ ಅಲ್ಲ, ಅವರ ರಾಜಕಾರಣಕ್ಕೆ ಮುಸ್ಲಿಮರು ಬೇಕಾಗಿದ್ದು ಮುಸ್ಲಿಮರನ್ನೇ ತೋರಿಸಿ ಅಧಿಕಾರಕ್ಕೆ ಬರುತ್ತಾರೆ ಎಂದರು. ಬಿಜೆಪಿಯವರ ಮುಖ್ಯ ಟಾರ್ಗೆಟ್ ಸಮಾನತೆ‌ಯಾಗಿದ್ದು ಅವರಿಗೆ ಹಿಂದಿನ ಕಾಲದ ಅಸಮಾನತೆ ಬೇಕಾಗಿದೆ, ಆ ಅಸಮಾನತೆಯನ್ನು‌ ಮರುಸ್ಥಾಪಿಸಲು ಅವರು ಸಮಾನತೆಯನ್ನು ಸ್ಥಾಪಿಸುವ ಸಂವಿಧಾನವನ್ನು ತೆಗೆದದುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ‌ ಸ್ಪಷ್ಟತೆ ಇದೆ, ಆದರೆ ಸಂಘಟನೆಯಲ್ಲಿ‌ ಸಮಸ್ಯೆ ಇದೆ, ಅಧಿಕಾರ ಬಂದಾಗ ಬೇರೆಯೇ ನಡೆಯುತ್ತದೆ, ಅದನ್ನು ದಾಟಿ ಕಾಂಗ್ರೆಸ್ ಮುಂದುವರಿಯಬೇಕು, ಸಂಘಟನೆಯಲ್ಲಿ‌ ಸಿದ್ಧಾಂತವನ್ನು ಬಲಪಡಿಸಬೇಕು ಎಂದು ಪ್ರತಿಕ್ರಿಯಿಸಿದರು.

ರಾಹುಲ್ ಗಾಂಧಿ ಉತ್ತಮ ನಾಯಕ, ಅವರ ವಿರೋಧಿಗಳೇ ಅವರನ್ನು ಈಗ ಒಪ್ಪಿಕೊಳ್ಳುತ್ತಿದ್ದಾರೆ ಎಂದ ಸೆಂಥಿಲ್, ರಾಹುಲ್ ಗಾಂಧಿ‌ ಲೋಕಸಭೆಯಲ್ಲಿ ಶಿವನ ಫೋಟೋ‌ ಪ್ರದರ್ಶನ ಮಾಡಿರುವುದು ಐಡೆಂಟಿಟಿ ರಾಜಕಾರಣದ ಭಾಗ ಎಂದರು. ಐಡೆಂಟಿಟಿ ತುಂಬಾ ಮುಖ್ಯ ಎಂದು ಕಾಂಗ್ರೆಸ್‌ಗೆ ಈಗ ಅರ್ಥ ಆಗಿದೆ, ಅದಕ್ಕಾಗಿ ರಾಹುಲ್ ಗಾಂಧಿ ಜಾತಿ ಗಣತಿ ನಡೆಸಲು ಪಟ್ಟು ಹಿಡಿದಿದ್ದಾರೆ ಎಂದರು. ಜಾತಿ ಗಣತಿಯಿಂದ ಭಾರತದ ಬಹುಜನರಿಗೆ ಪ್ರಯೋಜನವಾಗಲಿದ್ದು ಅವರಿಗೆ ತಮ್ಮ ಗುರುತು ಮತ್ತು ಹಿನ್ನೆಲೆ ತಿಳಿಯುತ್ತದೆ, ತಮ್ಮ‌ ಐಡೆಂಟಿಟಿ ತಿಳಿಯುವವರು ಹಿಂದುತ್ವದ ರಾಜಕಾರಣ ಮತ್ತು ಕೋಮುವಾದಗಳಿಗೆ ಬಲಿಬೀಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಫ್ಯಾಸಿಸ್ಟ್ ಸರಕಾರ ಇರುವಾಗ ಕಾರ್ಯಾಂಗವೂ ಅದಕ್ಕೆ ತಕ್ಕಂತೆ ವರ್ತಿಸುತ್ತದೆ ಎಂದ ಅವರು, ಕಾರ್ಯಾಂಗ ದೃಶ್ಯಕ್ಕೆ ತಕ್ಕಂತೆ ಬಟ್ಟೆ ಬದಲಾವಣೆ ಮಾಡುತ್ತದೆ, ಅದರ ಬಗ್ಗೆ ಚಿಂತೆ ಮಾಡಬೇಕಿಲ್ಲ ಎಂದರು.
ಭಾರತದ ಮುಂದೆ ಇರುವ ಎಲ್ಲಾ ಸಮಸ್ಯೆಗಳನ್ನು ಕೊನೆಗಾಣಿಸಬೇಕಾದರೆ ಮೋದಿ‌ ಸರಕಾರವನ್ನು ಅಧಿಕಾರದಿಂದ ತೆಗೆದು ಹಾಕಬೇಕು ಎಂದು ಹೇಳಿದರು.

ಯುವ ಜನರು ಮತ್ತು ಮಹಿಳೆಯರು ರಾಜಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು‌ ಸಸಿಕಾಂತ್ ಸೆಂಥಿಲ್ ಮನವಿ ಮಾಡಿದರು. ಯುವ ಸಮೂಹದ ಮಾತುಗಳನ್ನು‌ ನಾವೆಲ್ಲ ಆಲಿಸಬೇಕೆಂದು ಕೇಳಿಕೊಂಡರು.

ಸಂವಾದ ಕಾರ್ಯಕ್ರಮದಲ್ಲಿ‌ ಮಾಜಿ‌ ಸಚಿವ ರಮಾನಾಥ ರೈ, ಮಾಜಿ‌ ಶಾಸಕ ಜೆ.ಆರ್ ಲೋಬೋ‌, ಕೆಪಿಸಿಸಿ ವಕ್ತಾರೆ ಯು.ಟಿ ಫರ್ಝನಾ, ಎಡರಂಗದ ಮುಖಂಡ ಮುನೀರ್ ಕಾಟಿಪಳ್ಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಾರ್ಪೊರೇಟರ್ ಲತೀಫ್‌ ಕಂದಕ್, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನಾ ರವಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಾಹುಲ್ ಹಮೀದ್ ಕೆಕೆ, ಸೇರಿ ಹಲವು ಪ್ರಮುಖರು ಭಾಗಿಯಾಗಿದ್ದರು. ಪತ್ರಕರ್ತ ನವೀನ್ ಸೂರಿಂಜೆ ಸಂವಾದ ನಡೆಸಿಕೊಟ್ಟರು.

Join Whatsapp
Exit mobile version