ಮಂಗಳೂರಿನಿಂದ ಅರ್ಧದಲ್ಲಿ ಹೋದ ಕೊರಗು ಈಗಲೂ ಇದೆ: ಸಸಿಕಾಂತ್ ಸೆಂಥಿಲ್

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಾನಕ್ಕೆ ಅರ್ಧದಲ್ಲಿಯೇ ರಾಜೀನಾಮೆ ಕೊಟ್ಟು ಹೋದ ಕೊರಗು ಈಗಲೂ ಇದೆ. ಈ ನಿಟ್ಟಿನಲ್ಲಿ ಮಂಗಳೂರು ಸದಾ ನನ್ನ ನೆನಪಿನಲ್ಲಿ ಇದೆ. ಮಂಗಳೂರು ಎಂದರೆ ಮಿನಿ ಭಾರತದಂತೆ. ಇಲ್ಲಿ ವಿವಿಧ ಭಾಷೆ, ಸಂಸ್ಕೃತಿಯ ಜನ ವಾಸಿಸುತ್ತಿದ್ದಾರೆ ಎಂದು ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

- Advertisement -

ಸಂತ ತೆರೆಸಾ ವಿಚಾರ ವೇದಿಕೆ ಮಂಗಳೂರು ವತಿಯಿಂದ ನಗರದ ಪುರಭವನದಲ್ಲಿ ನಡೆದ ಸಂವಿಧಾನದ ಆಶಯಗಳಲ್ಲಿ ಪ್ರೀತಿ ಸಹಬಾಳ್ವೆಯ ಪಯಣ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಬುಡಕಟ್ಟು ಜನರ ಸಂಸ್ಕೃತಿಯಲ್ಲಿ ನಾವು ಸ್ಪರ್ಧೆಯ ಬದಲು ಸಹಕಾರವನ್ನು ಕಾಣುತ್ತೇವೆ. ಸ್ಪರ್ಧಾ ಮನೋಭಾವ ತ್ಯಜಿಸಿ ಸಹಕಾರವನ್ನು ಅಪ್ಪಿಕೊಳ್ಳುವುದು, ಪ್ರೀತಿಯನ್ನು ಬೆಳೆಸುವುದು ಆದ್ಯತೆಯಾಗಬೇಕು. ಮಕ್ಕಳಿಗೆ ಒಳ್ಳೆಯ ಸಮಾಜ ರೂಪಿಸದೇ ಹೋದರೆ ನಮ್ಮ ಬದುಕಿಗೆ ಏನು ಅರ್ಥವಿದೆ. ಜಗತ್ತನ್ನು ಹಬ್ಬದ ರೀತಿ ಸಂಭ್ರಮಿಸು ಸಮಾಜವನ್ನು ಕಟ್ಟಿದರೆ ಅದೇ ಮದರ್ ತೆರೆಸಾಗೆ ಸಲ್ಲಿಸುವ ದೊಡ್ಡ ಗೌರವ. ಎಲ್ಲ ಜಂಜಡಗಳ ನಡುವೆಯೂ ಸಂತೋಷವಾಗಿರುವುದನ್ನು ಕಲಿಯಬೇಕು’ ಎಂದರು.

- Advertisement -

‘ಒಬ್ಬರನ್ನೊಬ್ಬರು ದ್ವೇಷ ಮಾಡುವವರ, ಆಕ್ರಮಣಶೀಲರ ಕೈಗೆ ದೇಶವನ್ನು ಕೊಟ್ಟಿದ್ದೇವೆ. ಎಲ್ಲರೂ ಸಂತೋಷದಿಂದ ಕೂಡಿ ಬಾಳಬಹುದು ಎಂಬುದನ್ನು ನಂಬುವವರ ಸಂಖ್ಯೆಯೇ ದೇಶದಲ್ಲಿ ಜಾಸ್ತಿ ಇದೆ. ಪರಸ್ಪರ ನಂಬಿಕೆ ಇಲ್ಲದವರು, ದ್ವೇಷಿಸುವವರು ಇಲ್ಲಿ ಅಲ್ಪಸಂಖ್ಯಾತರು. ಭಾರತೀಯ ಚಿಂತನೆ ಇರುವುದು ಪರಸ್ಪರ ನಂಬುಗೆಯಲ್ಲಿ. ದೇಶದ ವಿಭಿನ್ನತೆಯಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟವರೆಲ್ಲ ನಮ್ಮ ಕಡೆ. ನಾವೆಲ್ಲ ಒಟ್ಟು ಸೇರಿ ದೊಡ್ಡ ಧ್ವನಿಯಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು. ಈ ದೇಶದಲ್ಲಿ ಬ್ರಿಟೀಷರ ವಿರುದ್ಧ ಕೇವಲ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆದಿಲ್ಲ. ಸಮಾನತೆಗಾಗಿಯೂ ಹೋರಾಟ ನಡೆದಿದೆ ಎಂದು ಅವರು ಹೇಳಿದರು.


ಸಂವಿಧಾನ ರಚನೆಯಾಗುವಾಗ ವಿವಿಧ ಜಾತಿ, ಧರ್ಮ, ಸಂಸ್ಕೃತಿಗಳ ಜನ ಒಟ್ಟಾಗಿ ಜೀವಿಸಬಹುದೇ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಈ ದೇಶದ ವಿವಿಧತೆಯನ್ನು ಸಂಭ್ರಮಿಸುವುದೇ ಈ ದೇಶದ ವಿಚಾರಧಾರೆ ಎಂದು ಸೆಂಥಿಲ್ ಹೇಳಿದರು.

ಈ ವಿಭಿನ್ನತೆಯನ್ನು ಆಚರಿಸುವಾಗ ಸಿಗುವ ಖುಷಿಯೇ ಬೇರೆ. ಹಾಗಾಗಿ ಪ್ರತಿಯೊಬ್ಬರೂ ವೈವಿಧ್ಯತೆಯನ್ನು ಸಹಿಸುವುದಕ್ಕಿಂತ ಸಂಭ್ರಮಿಸಬೇಕಿದೆ ಎಂದು ಅವರು ಹೇಳಿದರು.



Join Whatsapp
Exit mobile version