ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಸಚಿವರ ಕೊರತೆಯ ಬಗ್ಗೆ ವಿರೋಧ ಪಕ್ಷಗಳು ತೀವ್ರ ಟೀಕೆ ಮಾಡುತ್ತಿವೆ. ಈ ನಡುವೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮೇ ಮತ್ತು ಜುಲೈ ನಡುವೆ ನಡೆಯಲಿರುವ ಸಂಪುಟ ಪುನಾರಚನೆಯಲ್ಲಿ ಈ ತಾರತಮ್ಯ ಸರಿಪಡಿಸಲು ಎದುರು ನೋಡುತ್ತಿದೆ ಎಂದು The New Indian Express ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂಬ ತಮ್ಮ ಆಡಳಿತ ಮಂತ್ರಕ್ಕೆ ಅನುಗುಣವಾಗಿ ಮುಸ್ಲಿಂ ಸದಸ್ಯರನ್ನು ಸೇರಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಸೂಚಿಸಿವೆ.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರ ಮಟ್ಟದಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
ಸದ್ಯ ಬಿಜೆಪಿಯಲ್ಲಿ ಇಬ್ಬರು ಪ್ರಮುಖ ಮುಸ್ಲಿಂ ಮುಖಂಡರಿದ್ದಾರೆ. ರಾಜ್ಯಸಭಾ ಸಂಸದ ಗುಲಾಮ್ ಅಲಿ ಖತಾನಾ ಮತ್ತು ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ. ಸಿದ್ದಿಕಿ ಅವರನ್ನು ಸೇರಿಸಿಕೊಂಡರೆ, ಅವರಿಗೆ ತರುವಾಯ ರಾಜ್ಯಸಭಾ ಟಿಕೆಟ್ ಸಿಗಬಹುದು. ಸಿದ್ದಿಕಿ ಮಹಾರಾಷ್ಟ್ರದವರಾಗಿದ್ದರೆ, ಖತಾನಾ ಜಮ್ಮು ಮತ್ತು ಕಾಶ್ಮೀರದವರು.
ಮೇ ಎರಡನೇ ವಾರದೊಳಗೆ ಪಕ್ಷವು ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ ನಂತರ ಸಂಪುಟ ಪುನರ್ ರಚನೆ ಬಗ್ಗೆ ಗಮನ ಹರಿಸಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.