ಬೆಂಗಳೂರು: ಅಡುಗೆ ಅನಿಲ ಬೆಲೆಯನ್ನು ಒಮ್ಮೆಲೆ ಐವತ್ತು ರೂಪಾಯಿ ಏರಿಸಿರುವ ಕೇಂದ್ರ ಸರ್ಕಾರ ಬಡ ಮಧ್ಯಮ ವರ್ಗದ ಜನರ ಪಾಲಿಗೆ ಹೊರೆಯಾಗಿದೆ. ದಿನ ಬಳಕೆಯ ವಸ್ತುಗಳ ಬೆಲೆಯು ಗಗನಕ್ಕೇರಿರುವಾಗ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮ ನಸೀಮಾರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈಗಾಗಲೇ ಸರ್ಕಾರಿ ಸಂಸ್ಥೆಗಳ ಖಾಸಗಿಕರಣದ ಮೂಲಕ ಪ್ರತಿಯೊಂದು ವಸ್ತುಗಳು ದುಬಾರಿಯಾಗಿದೆ. ಹೋಳಿ ದೀಪಾವಳಿಗೆ ಉಚಿತ ಸಿಲಿಂಡರ್ ನೀಡುತ್ತೇವೆ ಎಂದು ಭರವಸೆ ನೀಡಿ ಇದೀಗ ಭರವಸೆಯು ಹುಸಿಯಾಗಿದೆ.
ಮಹಿಳೆಯರಿಗೆ ಉಜ್ವಲ ಯೋಜನೆಯ ಮುಖಾಂತರ ಉಚಿತ ಸಿಲಿಂಡರ್ ನೀಡುತ್ತೇವೆ ಎನ್ನುವ ಭರವಸೆಯು ಕೇವಲ ಭರವಸೆಗೆ ಸೀಮಿತವಾಗಿದೆ. ಬಡ ಗ್ರಾಮೀಣ ಹಿನ್ನೆಲೆಯ ಮಹಿಳೆಯರಿಗೆ ಅನಿಲ ಮರುಪೂರಣವು ಅತ್ಯಂತ ತ್ರಾಸದಾಯಕವಾಗಿರುವುದರಿಂದ ಮಾಲಿನ್ಯಕಾರಕ ಅನಾರೋಗ್ಯಕರ ಕಟ್ಟಿಗೆ ಅಥವಾ ಲದ್ದಿಯಂತಹ ಪರ್ಯಾಯ ಒಲೆಗೆ ತಿರುಗುವುದು ಅನಿವಾರ್ಯವಾಗಿದೆ.
ಸರ್ಕಾರವು ಜನಸಾಮಾನ್ಯರಿಗೆ 250 ಸಬ್ಸಿಡಿ ಮೊತ್ತವನ್ನು ಬ್ಯಾಂಕ್ ಅಕೌಂಟ್ ಖಾತೆಗೆ ಹಾಕುತ್ತೇವೆ ಎನ್ನುವ ಭರವಸೆಯೊಂದಿಗೆ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ತೆರೆಸುವಂತೆ ಮಾಡಿತ್ತು. ಇದೀಗ ಸಬ್ಸಿಡಿಯನ್ನು ಸಂಪೂರ್ಣ ರದ್ದುಗೊಳಿಸಿ ಜನರನ್ನು ವಂಚಿಸಿದೆ. ಜನಸಾಮಾನ್ಯರು ಪಾವತಿಸುವ ಹಣದ ಮೊತ್ತಕ್ಕೆ ಲಭಿಸುವ ಅನಿಲದ ಮೌಲ್ಯವು ತೀರಾ ನಗಣ್ಯವಾಗಿದೆ. ಇದು ಒಂದು
ಹಗಲು ದರೋಡೆ ಮಾತ್ರವಲ್ಲದೆ ಇನ್ನೇನೂ ಅಲ್ಲ.
ಕೇಂದ್ರ ಸರ್ಕಾರ ಅಚ್ಚೆ ದಿನ್ ಉಜ್ವಲ ಯೋಜನೆ ಅಂತಹ ಆಕರ್ಷಕ ನುಡಿಗಟ್ಟುಗಳ ಮೂಲಕ ಅಧಿಕಾರಕ್ಕೆ ಬಂದು ತಮ್ಮ ಭರವಸೆಗೆ ತೀರಾ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿಮೆನ್ ಇಂಡಿಯಾ ಮೂವ್ಮೆಂಟ್ ಇದನ್ನು ತೀವ್ರವಾಗಿ ಖಂಡಿಸಿ ಈ ತಿಂಗಳ 11ರಿಂದ 14ರವರೆಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅನ್ಯಾಯದ ವಿರುದ್ಧ ಧ್ವನಿ ಎತ್ತಲು ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ತಕ್ಷಣ ಅಡುಗೆ ಅನಿಲ ಬೆಲೆ ಇಳಿಸಿ ಸಬ್ಸಿಡಿಯನ್ನು ಮರುಸ್ಥಾಪಿಸಲು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.
ಮಹಿಳೆಯರೆಲ್ಲರೂ ಈ ಪ್ರತಿಭಟನೆಯಲ್ಲಿ ಸ್ಥಳೀಯ ವಿಮೆನ್ ಇಂಡಿಯಾ ಮೂವ್ಮೆಂಟ್ ಜೊತೆ ಕೈ ಜೋಡಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.