Home ಟಾಪ್ ಸುದ್ದಿಗಳು ‘EVMಗಳನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದು, ಫಲಿತಾಂಶವನ್ನು ತಿರುಚಲು ಸಾಧ್ಯವಿದೆ’: ಅಮೆರಿಕ ಕಳವಳ

‘EVMಗಳನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದು, ಫಲಿತಾಂಶವನ್ನು ತಿರುಚಲು ಸಾಧ್ಯವಿದೆ’: ಅಮೆರಿಕ ಕಳವಳ

0

►ಭಾರತದ ಇವಿಎಂಗಳು ಸುರಕ್ಷಿತ: ಚುನಾವಣಾ ಆಯೋಗ ಪ್ರತಿಕ್ರಿಯೆ

ನವದೆಹಲಿ: ದೇಶದಲ್ಲಿ ಬಳಸುವ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ‘ಭಾರತದಲ್ಲಿ ಬಳಸಲಾಗುವ ಇವಿಎಂಗಳು ಸರಳ ಹಾಗೂ ಕರಾರುವಾಕ್ಕಾದ ಕ್ಯಾಲ್ಕುಲೇಟರ್‌ಗಳ ರೀತಿ ಕಾರ್ಯನಿರ್ವಹಿಸುವ ಸಾಧನಗಳಾಗಿವೆ’ ಎಂದು ಚುನಾವಣಾ ಆಯೋಗ ಶುಕ್ರವಾರ ಹೇಳಿದೆ.

‘ಇಂಟರ್‌ನೆಟ್‌, ವೈಫೈ ಅಥವಾ ಇನ್‌ಫ್ರಾರೆಡ್‌ನೊಂದಿಗೆ ಇವಿಎಂಗಳ ಜೋಡಣೆ ಮಾಡಲು ಸಾಧ್ಯವಿಲ್ಲ’ ಎಂದೂ ಪುನರುಚ್ಚರಿಸಿದೆ.

ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬಾರ್ಡ್‌ ಅವರು ಇವಿಎಂಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಮತಪತ್ರಗಳನ್ನು ಬಳಸಿ ನಡೆಸುವ ಚುನಾವಣಾ ವ್ಯವಸ್ಥೆಗೆ ಮತ್ತೆ ಮರಳಬೇಕು ಎಂದೂ ಪ್ರತಿಪಾದಿಸಿದ್ದರು. ಅವರ ಈ ಹೇಳಿಕೆಗೆ ಆಯೋಗವು ಈ ಪ್ರತಿಕ್ರಿಯೆ ನೀಡಿದೆ ಎಂದು ಮೂಲಗಳು ಹೇಳಿವೆ.

‘ಇವಿಎಂಗಳನ್ನು ಸುಲಭವಾಗಿ ಹ್ಯಾಕ್‌ ಮಾಡಬಹುದು ಹಾಗೂ ಫಲಿತಾಂಶವನ್ನು ತಿರುಚಲು ಸಾಧ್ಯವಿದೆ ಎಂಬುದಕ್ಕೆ ಪುರಾವೆಗಳಿವೆ’ ಎಂದು ಗಬಾರ್ಡ್‌ ಇತ್ತೀಚೆಗೆ ಹೇಳಿದ್ದರು.

‘ಎಲ್ಲೆಡೆ ಮತಪತ್ರಗಳನ್ನು ಬಳಸುವ ವ್ಯವಸ್ಥೆ ಪುನಃ ಜಾರಿಗೊಳ್ಳಬೇಕು. ಹೀಗೆ ಮಾಡುವುದರಿಂದ ಚುನಾವಣೆಗಳ ಸಮಗ್ರತೆ ಕುರಿತು ಮತದಾರರಲ್ಲಿ ನಂಬಿಕೆ ಬರಲಿದೆ’ ಎಂದೂ ಹೇಳಿದ್ದರು.

‘ಭಾರತದಲ್ಲಿ ಬಳಸುವ ಇವಿಎಂಗಳನ್ನು ಸುಪ್ರೀಂ ಕೋರ್ಟ್‌ ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದೆ. ಸುರಕ್ಷತೆ ಬಗ್ಗೆ ಸಂಶಯ ವ್ಯಕ್ತವಾದ ಸಂದರ್ಭಗಳಲ್ಲೆಲ್ಲಾ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಅವುಗಳ ಪರಿಶೀಲನೆ ನಡೆಸಲಾಗಿದೆ. ಮತದಾನ ಆರಂಭಗೊಳ್ಳುವುದಕ್ಕೂ ಮುನ್ನ ಅಣಕು ಮತದಾನ ನಡೆಸಲಾಗಿದೆ’ ಎಂದು ಆಯೋಗದ ಮೂಲಗಳು ಹೇಳಿವೆ.

‘ಮತ ಎಣಿಕೆ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲೇ 5 ಕೋಟಿಗೂ ಅಧಿಕ ವಿವಿಪ್ಯಾಟ್‌ ಚೀಟಿಗಳ ಪರಿಶೀಲನೆ ನಡೆಸಿದ್ದು, ಚಲಾವಣೆಗೊಂಡ ಮತಗಳೊಂದಿಗೆ ತಾಳೆಯಾಗಿದ್ದನ್ನು ಖಾತ್ರಿಪಡಿಸಿಕೊಳ್ಳಲಾಗಿದೆ ಎಂಬುದಾಗಿ ಆಯೋಗ ತಿಳಿಸಿದೆ’ ಎಂದೂ ಮೂಲಗಳು ಹೇಳಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version