ಬೆಂಗಳೂರು: ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು ಕಾಂಗ್ರೆಸ್ ಕಾರ್ಯಕರ್ತರಲ್ಲ, ಬದಲಿಗೆ ಬಿಜೆಪಿ ಪಕ್ಷದ ಬೆಂಬಲಿಗರು. ಮುನಿರತ್ನ ಅವರಿಂದ ಕ್ಷೇತ್ರಕ್ಕೆ ಅವಮಾನವಾಗಿದೆ ಎಂಬ ಕಾರಣಕ್ಕೆ ಆಕ್ರೋಶಗೊಂಡು ಆರೋಪಿಗಳು ಮೊಟ್ಟೆ ದಾಳಿ ನಡೆಸಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
2024ರ ಡಿಸೆಂಬರ್ 25ರಂದು ಲಕ್ಷ್ಮೇದೇವಿ ನಗರದಲ್ಲಿ ಆಯೋಜನೆಯಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದಾಗ ಶಾಸಕ ಮುನಿರತ್ನರ ಮೇಲೆ ಮೊಟ್ಟೆ ದಾಳಿ ನಡೆದಿತ್ತು. ಈ ಸಂಬಂಧ ನಂದಿನಿ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿ ಸಮಗ್ರ ತನಿಖೆ ನಡೆಸಿದ್ದು, ಆರೋಪಿಗಳು ಬಿಜೆಪಿ ಬೆಂಬಲಿಗರೆಂಬ ಸಂಗತಿ ದೃಢಪಟ್ಟಿತ್ತು.
‘ಮುನಿರತ್ನ ಅವರು ಜಾಮೀನಿನ ಮೇಲೆ ಹೊರಬಂದ ಬಳಿಕ ಆರೋಪಿಗಳು ಗುಂಪು ಕಟ್ಟಿಕೊಂಡು ಶಾಸಕರ ವಿರುದ್ಧ ಪ್ರತಿಭಟನೆ ಸಹ ನಡೆಸಿದ್ದರು. ಮುಂಜಾಗ್ರತಾ ಕ್ರಮಮವಾಗಿ ಎರಡು ಬಾರಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಿಟ್ಟು ಕಳುಹಿಸಲಾಗಿತ್ತು. ಡಿ.25ರಂದು ಮುನಿರತ್ನ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದರ ಬಗ್ಗೆ ಮಾಹಿತಿ ತಿಳಿದಿದ್ದ ಆರೋಪಿಗಳು, ಸಂಚು ರೂಪಿಸಿ ಮೊಟ್ಟೆ ಎಸೆದಿದ್ದರು. ಸಮೀಪದ ಅಂಗಡಿಯೊಂದರಲ್ಲಿ ಮೊಟ್ಟೆ ಖರೀದಿಸಿ ಮುನಿರತ್ನ ಅವರು ಬರುತ್ತಿದ್ದಂತೆಯೇ ಏಕಾಏಕಿ ಎಸೆದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಪ್ರಕರಣದ ತನಿಖೆ ನಡೆಯುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ್) ವರದಿ ಬಂದ ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.