ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸ್ ಸಂಚು ನಡೆಸಿದೆ ಎಂದು ಪಕ್ಷವು ಆರೋಪಿಸಿದೆ.
ಅಲ್ಲದೆ ಕೇಜ್ರಿವಾಲ್ ಅವರಿಗೆ ಪಂಜಾಬ್ ಪೊಲೀಸ್ ನೀಡಿದ್ದ ಭದ್ರತೆಯನ್ನು ಮರುಸ್ಥಾಪಿಸುವಂತೆಯೂ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.
ಎಎಪಿ ಆರೋಪಕ್ಕೆ ಬಿಜೆಪಿ ಅಥವಾ ದೆಹಲಿ ಪೊಲೀಸ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆ ಮರುಸ್ಥಾಪಿಸಲು ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
‘ಗೃಹ ಸಚಿವ ಅಮಿತ್ ಶಾ ನಿರ್ದೇಶನದಂತೆ ಕೇಜ್ರಿವಾಲ್ ಮೇಲೆ ದಾಳಿ ನಡೆಯುತ್ತಿದೆ. ಆದರೆ ಕೇಂದ್ರದ ಅಡಿಯಲ್ಲಿ ಬರುವ ದೆಹಲಿ ಪೊಲೀಸ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆತಿಶಿ ಆರೋಪಿಸಿದ್ದಾರೆ.