Home ಟಾಪ್ ಸುದ್ದಿಗಳು ಸಂವಿಧಾನ ಬದಲಾವಣೆ ಬಿಜೆಪಿ, ಆರೆಸ್ಸೆಸ್ ಗುಪ್ತ ಅಜೆಂಡಾ: ಸಿದ್ದರಾಮಯ್ಯ

ಸಂವಿಧಾನ ಬದಲಾವಣೆ ಬಿಜೆಪಿ, ಆರೆಸ್ಸೆಸ್ ಗುಪ್ತ ಅಜೆಂಡಾ: ಸಿದ್ದರಾಮಯ್ಯ

ಮೈಸೂರು: ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳು, ಮಹಿಳೆಯರು, ದಲಿತರಿಗೆ ಮೀಸಲಾತಿ ನೀಡುವ ಕಾನೂನು ಜಾರಿಗೊಳಿಸಿದಾಗ ಅದರ ವಿರುದ್ಧ ರಾಮಜೋಯ್ಸ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆರ್.ಎಸ್.ಎಸ್ ನಾಯಕರು ಯಾವತ್ತೂ ಮೀಸಲಾತಿ ಪರವಾಗಿರುವವರಲ್ಲ. ಸಾಮಾಜಿಕ ನ್ಯಾಯ, ಸರ್ವಧರ್ಮ ಸಮನ್ವಯ ಸಾರುವ ಸಂವಿಧಾನ ಬದಲಾವಣೆ ಮಾಡಬೇಕು ಎಂಬುದು ಅವರ ಗುಪ್ತ ಅಜೆಂಡಾ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.


ಮುಂದುವರೆದ ಜಾತಿಗಳ ಬಡವರಿಗೆ ಶೇ. 10 ಮೀಸಲಾತಿ ಘೋಷಣೆ ಮಾಡಿದ ನಂತರದಿಂದ ಮೀಸಲಾತಿಯ ಬಗ್ಗೆ ಆರ್.ಎಸ್.ಎಸ್ ಧೋರಣೆ ಬದಲಾದಂತೆ ಕಾಣುತ್ತಿದೆ. ಈ ಕಾರಣಕ್ಕಾಗಿ ಬಿಜೆಪಿಯವರು ಮೀಸಲಾತಿ ವಿರುದ್ಧ ಮಾತನಾಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅವರು ಜಾತಿಗಣತಿ ಏಕೆ ಮಾಡಬಾರದು? ಜಾತಿಗಣತಿ ಮಾಡಿದರೆ ಬಡತನ ರೇಖೆಗಳಿಗಿಂತ ಕೆಳಗಿರುವ, ಅಸ್ಪೃಶ್ಯರಿಗೆ ಸರ್ಕಾರಿ ಯೋಜನೆಗಳ ಮೂಲಕ ವಿಶೇಷ ಗಮನ ನೀಡಲು ಅನುಕೂಲವಾಗಲಿದೆ. ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರ ಬಂದಾಗಲೆಲ್ಲಾ ಜಾತಿಗಣತಿಗೆ ಸಂಬಂಧಿಸಿದಂತೆ ನಿಮ್ಮ ಬಳಿಯಿರುವ ವಸ್ತುನಿಷ್ಠ, ನಂಬಿಕಾರ್ಹ ಮಾಹಿತಿ ಏನು ಎಂದು ನ್ಯಾಯಾಲಯ ಪ್ರಶ್ನಿಸುತ್ತದೆ. ಈ ಕಾರಣಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿಗೆ ಆದೇಶ ಮಾಡಿದ್ದೆ. 1931 ರಲ್ಲಿ ದೇಶದಲ್ಲಿ ಕಡೇ ಬಾರಿಗೆ ಜಾತಿಗಣತಿ ನಡೆದದ್ದು ಎಂದು ಸಿದ್ದರಾಮಯ್ಯ ತಿಳಿಸಿದರು.


ಈಗಿನ ಬಿಜೆಪಿ ಸರ್ಕಾರ ಸಂವಿಧಾನಕ್ಕೆ 127ನೇ ತಿದ್ದುಪಡಿ ಮಾಡಿ, ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ಮರಳಿ ಅಧಿಕಾರ ನೀಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿರುವುದು ಸಂವಿಧಾನ ಬಾಹಿರವಾಗುತ್ತದೆ. 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈಗ ಮೀಸಲಾತಿ ಶೇ. 60 ದಾಟಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಮೀಸಲಾತಿ ಪ್ರಮಾಣದ ಮಿತಿಯನ್ನು ದಾಟಬಹುದು ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದ್ದು, ಈ ವಿಶೇಷ ಸಂದರ್ಭಗಳು ಯಾವುದು ಎಂಬುದನ್ನು ರಾಜ್ಯಗಳು ನಿರ್ಧರಿಸಬೇಕು. ತಮಿಳುನಾಡಲ್ಲಿ ಶೇ. 70 ಮೀಸಲಾತಿ ಇದೆ, ಮಹಾರಾಷ್ಟ್ರದಲ್ಲೂ ಮೀಸಲಾತಿ ಪ್ರಮಾಣ ಹೆಚ್ಚಿದೆ. ಕೇಂದ್ರ ಸರ್ಕಾರಕ್ಕೆ ಮೀಸಲಾತಿ ವಿಚಾರದಲ್ಲಿ ಬದ್ಧತೆಯಿದ್ದರೆ ಜಾತಿಗಣತಿ ಮಾಡಲಿ. ಇದರಿಂದ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದರು.


ನಮ್ಮ ಸರ್ಕಾರದ ಅವಧಿಯಲ್ಲಿ ಆದೇಶಿಸಲಾಗಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಮೈತ್ರಿ ಸರ್ಕಾರದ ವೇಳೆ ಪೂರ್ಣಗೊಂಡಿತ್ತು. ಆಗ ಪುಟ್ಟರಂಗ ಶೆಟ್ಟಿಯವರು ಹಿಂದುಳಿದ ವರ್ಗಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಅವರಿಗೆ ವರದಿ ಸ್ವೀಕರಿಸದಂತೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಕೀತು ಮಾಡಿದ್ದರು. ಈಗ ಬಿಜೆಪಿ ಸರ್ಕಾರವಾದರೂ ವರದಿಯನ್ನು ಸ್ವೀಕರಿಸಿ, ವರದಿ ಬಗ್ಗೆ ಚರ್ಚೆ ಮಾಡಲಿ. ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೂಡಲೇ ವರದಿ ಸ್ವೀಕರಿಸುತ್ತೇವೆ ಎಂದರು.


ರಾಜ್ಯ ಬಿಜೆಪಿ ಸರ್ಕಾರದ ಮಂತ್ರಿಮಂಡಲ ರಚನೆಗೆ ಸಂಬಂಧಿಸಿದಂತೆ ಹಲವು ಮಂದಿ ಶಾಸಕರಿಗೆ ಅಸಮಾಧಾನವಿದೆ. ಈ ಅಸಮಾಧಾನದ ಹೊಗೆ ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು. ಯಾರಿಗೆ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವವಿರಲ್ಲ, ಅಂಥವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ.


ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳ ಕೊರತೆಯಿಲ್ಲ. ಒಬ್ಬ ಪಕ್ಷ ತೊರೆದರೆ ಬೇರೆ ನಾಲ್ಕು ಮಂದಿ ಆಕಾಂಕ್ಷಿಗಳು ಸಿಗುತ್ತಾರೆ. ಸೆಪ್ಟೆಂಬರ್ ತಿಂಗಳಿಗೆ ಅಧಿವೇಶನ ನಡೆದು ಆರು ತಿಂಗಳಾಗುತ್ತದೆ, ಹಾಗಾಗಿ ತುರ್ತಾಗಿ ವಿಧಾನಸಭಾ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಶಾಸಕ ಜಮೀರ್ ಅಹ್ಮದ್ ಮತ್ತು ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ. ನನಗೆ ಅವರ ಮೇಲೆ, ಅವರಿಗೆ ನನ್ನ ಮೇಲೆ ಬೇಸರವಾಗುವಂತಹಾ ಯಾವುದೇ ಘಟನೆಗಳೇ ನಡೆದಿಲ್ಲ. ಇದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಸಿದ್ದರಾಮಯ್ಯ ಹೇಳಿದರು.


ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಿ, ಇದರ ಜೊತೆಗೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಿ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ವರದಿ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ನೀಡಿದವರು ನಾವು. ಈಗ ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ಬಿಜೆಪಿ ಸರ್ಕಾರವಿದೆ. ಕೇಂದ್ರದ ಅನುಮತಿ ಪಡೆದು ಯೋಜನೆ ಅನುಷ್ಠಾನ ಕಾರ್ಯ ಆರಂಭ ಮಾಡಬೇಕು. ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಪಡೆಯುವ ಅಗತ್ಯವೇನಿದೆ? ಅವರ ಅನುಮತಿ ಏಕೆ ಬೇಕು? ನಮಗೆ ಬೇಕಾಗುವಷ್ಟು ನೀರನ್ನು ಶೇಖರಿಸಿಟ್ಟುಕೊಂಡು, ತಮಿಳುನಾಡಿಗೆ ಅವರಿಗೆ ಕೊಡಬೇಕಾದ ನೀರಿನ ನ್ಯಾಯಯುತ ಪಾಲನ್ನು ಕೊಟ್ಟರೆ ಅವರೇಕೆ ಯೋಜನೆಗೆ ಅಡ್ಡ ಬರ್ತಾರೆ? ಕೊರೊನಾ ಕಾರಣದಿಂದ ನಾವು ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಸಂಬಂಧ ಹೆಚ್ಚಿನ ಸಭೆಗಳನ್ನು ನಡೆಸುತ್ತಿಲ್ಲ. ಎಲ್ಲರಿಗೂ ಕೊರೊನಾ ಲಸಿಕೆ ಹಾಕಲಿ ಎಂದು ಕಾಯುತ್ತಿದ್ದೆವು. ಈ ಸರ್ಕಾರ ಲಸಿಕೆಯನ್ನೂ ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಮೊದಲ ಡೋಸ್ ಕತೆ ಬಿಡಿ, ಎರಡನೇ ಡೋಸ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಏಕೆ ಸಿಗಲ್ಲ?

ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ, ಆಗ ಈಶ್ವರಪ್ಪ ಎಲ್ಲಿದ್ದರು? ಆಗ ಸುಮ್ಮನಿದ್ದು ಈಗ ನಮ್ಮ ಸರ್ಕಾರವನ್ನು ಟೀಕೆ ಮಾಡಿದರೆ ಏನರ್ಥ? ಅವರ ಮಾತುಗಳಿಗೆ ಯಾವ ಕಿಮ್ಮತ್ತಿಲ್ಲ. ಬಿಜೆಪಿ ಸರ್ಕಾರ ಕೇವಲ ಯೋಜನೆಗಳನ್ನು ಘೋಷಣೆ ಮಾಡುತ್ತೆ ವಿನಃ ಜಾರಿ ಮಾಡಲ್ಲ. ಆಟೋ, ಕ್ಯಾಬ್ ಚಾಲಕರಿಗೆ ಲಾಕ್ ಡೌನ್ ಪರಿಹಾರ ನೀಡಿಲ್ಲ, 2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಮನೆ ಕಟ್ಟಿಕೊಟ್ಟಿಲ್ಲ. ಮೊದಲ ಇದನ್ನೆಲ್ಲ ಮಾಡಲಿ.


ನಾವು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಕಾಯ್ದೆಯನ್ನು ಜಾರಿಗೆ ತರಲು ಹೊರಟಿಲ್ಲ ಎಂದು ಬಿಜೆಪಿಯವರು ಸಂಸತ್ತಿನಲ್ಲಿ ಹೇಳಲಿ, ಆಗ ನಾನು ವಿರೋಧ ಮಾಡಲ್ಲ. ಬಿಜೆಪಿಯವರು ಎಷ್ಟೋ ಕಾಯ್ದೆಗಳನ್ನು ಚರ್ಚೆಯೇ ಮಾಡದೆ ಜಾರಿ ಮಾಡಿದ್ದಾರೆ. ಇವರನ್ನು ಹೇಗೆ ನಂಬೋದು? ಶಿಕ್ಷಣ ಮೊದಲು ರಾಜ್ಯಪಟ್ಟಿಯ ವಿಷಯವಾಗಿತ್ತು, ನಂತರ ಸಮವರ್ತಿ ಪಟ್ಟಿಗೆ ಸೇರಿತು. ಈಗಿನ ಬಿಜೆಪಿ ಸರ್ಕಾರ ರಾಜ್ಯಗಳನ್ನು ಕಡೆಗಣಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಹೊರಟಿರುವುದು ಎಷ್ಟು ಸರಿ? ಎಪಿಎಂಸಿ ಕಾಯ್ದೆ, ಕೃಷಿ ಕಾಯ್ದೆ ಇವುಗಳ ಬಗ್ಗೆ ಬಿಜೆಪಿ ಸರ್ಕಾರ ಚರ್ಚೆ ಮಾಡಿದೆಯೇ?


ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಜಾರಿಯಿಂದ ಮಾತೃಭಾಷಾ ಕಲಿಕೆಗೆ ತೊಡಕಾಗಲಿದೆ. ಮೂರು ವರ್ಷದ ಡಿಗ್ರಿ ಕೋರ್ಸನ್ನು ನಾಲ್ಕು ವರ್ಷಕ್ಕೆ ಹೆಚ್ಚಿಸಿ, ಕನ್ನಡ ಭಾಷಾ ಕಲಿಕೆಯನ್ನು ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಸಲಾಗುತ್ತದೆ. ಎರಡು ಸೆಮಿಸ್ಟರ್ ಅವಧಿಯಲ್ಲಿ ಕನ್ನಡ ಭಾಷೆ ಕಲಿಯಲು ಸಾಧ್ಯವೇ? ಸದನದಲ್ಲೇ ಕೆಲಸವರಿಗೆ ಸಂಧಿ, ಸಮಾಸಗಳ ಬಗ್ಗೆ ಗೊತ್ತಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಖಂಡಿತಾ ನ್ಯಾಯಾಲಯದ ಮೊರೆ ಹೋಗುತ್ತಾರೆ. ಕನ್ನಡ ಭಾಷಾ ವಿಷಯ ಕಲಿಕೆಯನ್ನು ಕನಿಷ್ಠ ಆರು ಸೆಮಿಸ್ಟರ್ ಅಂದರೆ ಮೂರು ವರ್ಷ ಕಲಿಯಲು ಅವಕಾಶ ನೀಡಬೇಕು ಎಂಬುದು ನನ್ನ ಅನಿಸಿಕೆ ಎಂದು ಸಿದ್ದರಾಮಯ್ಯ ತಿಳಿಸಿದರು.

Join Whatsapp
Exit mobile version