ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ತಂಡವೇ ಕಾರಣ ಎಂದು ಅಲ್ಲಿನ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ನಗರದ ಕೆ.ಬಿ.ಬಡಾವಣೆಯ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಅವರ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್, ಬಿ.ಎಸ್.ಜಗದೀಶ್, ಎಸ್.ವಿ.ರಾಮಚಂದ್ರಪ್ಪ ರೇಣುಕಾಚಾರ್ಯ ಅಂಡ್ ಟೀಂ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಟಿಕೆಟ್ ಘೋಷಣೆಗೂ ಮೊದಲು ರೇಣುಕಾಚಾರ್ಯ ಶುರು ಮಾಡಿದ್ದ ಗೊಂದಲ ಕೊನೆಯವರೆಗೂ ಮುಂದುವರಿಯಿತು. ಈ ಕಾರಣದಿಂದಲೇ ಬಿಜೆಪಿ ಸೋಲಬೇಕಾಯಿತು ಎಂದು ಹೇಳಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆ. ಕಳೆದ 26 ವರ್ಷಗಳಿಂದಲೂ ಇಲ್ಲಿ ಗೆದ್ದಿರುವುದು ಬಿಜೆಪಿಯೇ. ಆದರೆ, ಬಿಜೆಪಿ ಪಕ್ಷದವರ ಅಸಹಕಾರ, ಭಿನ್ನಮತೀಯ ಚಟುವಟಿಕೆ, ನಡವಳಿಕೆ ಸರಿಯಿಲ್ಲದ ಕಾರಣ ನಾವು ಸೋಲು ಕಾಣಬೇಕಾಯಿತು. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಪರೋಕ್ಷವಾಗಿ ಬೆಂಬಲಿಸಿದ ಕಾರಣ ಸೋಲುಂಟಾಗಿದೆ. ಈಗ ಬಿಜೆಪಿ ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಆರೋಪಿಸಿದರು.