Home ಟಾಪ್ ಸುದ್ದಿಗಳು ಅತ್ಯಾಚಾರ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಸಿ ಮಹಿಳೆಯ ಮೇಲೆ ಆಸಿಡ್ ದಾಳಿ

ಅತ್ಯಾಚಾರ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಸಿ ಮಹಿಳೆಯ ಮೇಲೆ ಆಸಿಡ್ ದಾಳಿ

ಮುಂಬೈ: ಭಾನುವಾರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಜೂನ್ ನಲ್ಲಿ ಮಹಿಳೆ ತನ್ನ ಸ್ನೇಹಿತೆ ಮತ್ತು ಆಕೆಯ ಸ್ನೇಹಿತರ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಮತ್ತು ಸುಲಿಗೆ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಸಿ ಈ ದುಷ್ಕೃತ್ಯ ನಡೆಸಲಾಗಿದೆಯೆಂದು ಮಹಿಳೆ ಎಫ್.ಐ.ಆರ್ ನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತೆ ಮಹಿಳೆ ದಾಖಲಿಸಿದ ಎಫ್.ಐ.ಆರ್ ಕುರಿತು ಪ್ರತಿಕ್ರಿಯೆ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಮಾತ್ರವಲ್ಲ ಮಹಿಳೆಯ ಮೇಲೆ ನಡೆದಿರುವ ಆಸಿಡ್ ದಾಳಿಯನ್ನು ವೈದ್ಯರು ಖಚಿತಪಡಿಸಿದ್ದು, ಈ ದಾಳಿಯಿಂದಾಗಿ ಅವರ ಕಾಲಿಗೆ ಗಂಭೀರ ಗಾಯವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ.

ಬಿಸ್ಲೇರ್ ಜಂಕ್ಷನ್ ಬಳಿಯ ಅಂಧೇರಿ-ಘಾಟ್ಕೋಪರ್ ಲಿಂಕ್ ರಸ್ತೆಯಲ್ಲಿ ರಾತ್ರಿ 11 ಘಂಟೆಗೆ ಈ ಘಟನೆ ನಡೆದಿದೆ. ತಾನು ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಅತ್ಯಾಚಾರ ಪ್ರಕರಣವನ್ನು ಹಿಂಪಡೆಯುವಂತೆ ಬೆದರಿಸಿ ಆಸಿಡ್ ಬಲೂನ್ ಅನ್ನು ತನ್ನ ಮೇಲೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ಆಕೆಯ ಕಿರುಚಾಟದ ಹಿನ್ನೆಲೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ತಕ್ಷಣ ಆಕೆಯನ್ನು ಅಸ್ಪತ್ರೆಗೆ ಸಾಗಿಸಿದರು. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 326 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅತ್ಯಾಚಾರ ಮತ್ತು ಸುಲಿಗೆ ಪ್ರಕರಣ ಹಿಂಪಡೆಯುವಂತೆ ಬೆದರಿಸಿ ಹಲವು ಕರೆಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಕ್ರಮ ಜರುಗಿಸದ ಕಾರಣ ಈಗ ತನ್ನ ಮೇಲೆ ಆಸಿಡ್ ದಾಳಿ ನಡೆದಿದೆಯೆಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ.

Join Whatsapp
Exit mobile version