Home ಟಾಪ್ ಸುದ್ದಿಗಳು ಓಂ ಪ್ರಕಾಶ್​ ಕೊಲೆ: ತನಿಖಾಧಿಕಾರಿಗಳ ಎದುರು ಕೊಲೆ ರಹಸ್ಯ ಬಿಚ್ಚಿಟ್ಟ ಮಾಜಿ ಡಿಜಿ ಪತ್ನಿ ಪಲ್ಲವಿ

ಓಂ ಪ್ರಕಾಶ್​ ಕೊಲೆ: ತನಿಖಾಧಿಕಾರಿಗಳ ಎದುರು ಕೊಲೆ ರಹಸ್ಯ ಬಿಚ್ಚಿಟ್ಟ ಮಾಜಿ ಡಿಜಿ ಪತ್ನಿ ಪಲ್ಲವಿ

0

ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹತ್ಯೆ ಪ್ರಕರಣ ಸಂಬಂಧ ಅವರ ಪತ್ನಿ ಹಾಗೂ ಮಗಳನ್ನು ವಶಕ್ಕೆ ಪಡೆದುಕೊಂಡಿರುವ ಬೆಂಗಳೂರು ಪೊಲೀಸರಿಗೆ ಒಂದೊಂದೇ ಭಯಾನಕ ವಿಚಾರಗಳು ತಿಳಿದುಬರುತ್ತಿವೆ.

ಘಟನೆ ಸಂಬಂಧ ತನಿಖಾಧಿಕಾರಿಗಳ ಎದುರು ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರು ಹೇಳಿಕೆ ನೀಡಿದ್ದು, ಅನೇಕ ಸ್ಫೋಟಕ ಅಂಶಗಳನ್ನು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಓಂ ಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಮಗಳು ಕೃತಿ ಪೊಲೀಸರ ವಶದಲ್ಲಿದ್ದಾರೆ. ಇಂದು ಓ ಪ್ರಕಾಶ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇಪದೆ ಗನ್ ತಂದು ನನಗೆ, ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಶೂಟ್ ಮಾಡುವುದಾಗಿ ಹೆದರಿಸುತ್ತಿದ್ದರು. ಬೆಳಗ್ಗೆಯಿಂದ ಬೇರೆಬೇರೆ ವಿಚಾರಕ್ಕೆ ‌ಮನೆಯಲ್ಲಿ ಜಗಳವಾಗಿದೆ. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಗಿ ನಮ್ಮನ್ನೇ ಕೊಲೆ ಮಾಡಲು ಓಂಪ್ರಕಾಶ್ ಯತ್ನಿಸಿದ್ದರು. ನಮ್ಮ ಜೀವ ಉಳಿಸಿಕೊಳ್ಳಲು ನಾವು ಹೋರಾಟ ಮಾಡಿದೆವು ಎಂದು ಓಂ ಪ್ರಕಾಶ್ ಪತ್ನಿ ಪಲ್ಲವಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ನಮ್ಮ ಜೀವ ಉಳಿಸಿಕೊಳ್ಳಲು ನಾವು ಹೋರಾಡಿದೆವು. ಬಳಿಕ ಖಾರದಪುಡಿ ಹಾಗೂ ಅಡುಗೆ ಎಣ್ಣೆ ಹಾಕಿದೆವು. ಕೈಕಾಲು‌ ಕಟ್ಟಿ ಚಾಕುವಿನಿಂದ ಚುಚ್ಚಿದ್ದೆವು ಎಂದು ಓಂ ಪ್ರಕಾಶ್ ಪತ್ನಿ ಪಲ್ಲವಿ ತನಿಖಾಧಿಕಾರಿಗಳ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಬಳಿಕ ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸಾವಿಗೀಡಾಗಿದ್ದಾರೆ. ಘಟನೆ ನಂತರ ಸಂಜೆ ಸ್ಥಳೀಯ ಪೊಲೀಸರಿಗೆ ಪಲ್ಲವಿ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಇದೀಗ ಪ್ರಕರಣದಲ್ಲಿ ಪಲ್ಲವಿ ಮೊದಲ ಆರೋಪಿಯಾಗಲಿದ್ದಾರೆ. ಹತ್ಯೆಯಲ್ಲಿ ಮಗಳ ಪಾತ್ರದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಇಬ್ಬರೂ ಪೊಲೀಸ್ ವಶದಲ್ಲಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version