ಗದಗ: ಮಾಜಿ ಪ್ರೇಮಿ ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.
ಸಾಯಿರಾಬಾನು ನದಾಫ್(29) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಸಾಯಿರಾಬಾನು ಡೆತ್ ನೋಟ್ ಬರೆದಿಟ್ಟಿದ್ದು, ಮೈಲಾರಿ ಎಂಬುತಾನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೇ 8ರಂದು ಸಾಯಿರಾಬಾನು ನದಾಫ್ ಮದುವೆ ನಿಗದಿಯಾಗಿತ್ತು. ಹಾಗಾಗಿ ಇತ್ತ ಮನೆಯಲ್ಲಿ ಅದ್ಧೂರಿ ಮದುವೆಗೆ ಭರ್ಜರಿ ತಯಾರಿ ಕೂಡ ನಡೆದಿತ್ತು. ನಿನ್ನೆ ಪೋಷಕರು ಮದುವೆ ವಸ್ತುಗಳ ಖರೀದಿಗೆ ಹೋದಾಗ ಸಾಯಿರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಬಾಗಿಲು ತೆರೆದು ನೋಡಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದುಬಂದಿದೆ. ಮಗಳ ಸ್ಥಿತಿ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮದುವೆ ಸಂಭ್ರಮದಲ್ಲಿ ಇದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ಕಳೆದ 5 ವರ್ಷಗಳಿಂದ ಸಾಯಿರಾಬಾನು, ಮೈಲೇರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿತ್ತು. ಬ್ರೇಕಪ್ ಬಳಿಕ ಪೋಷಕರ ಒತ್ತಾಯದ ಮೇರೆಗೆ ಸಾಯಿರಾಬಾನು ಬೇರೆ ಮದುವೆಗೆ ಒಪ್ಪಿಕೊಂಡಿದ್ದರು. ಆದರೆ ಸಾಯಿರಾಬಾನು ಮದುವೆ ತಯಾರಿ ನೋಡಿ ಮಾಜಿ ಪ್ರೇಮಿ ಮೈಲಾರಿ ಟಾರ್ಚರ್ ಶುರುವಾಗಿತ್ತು. ಬೇರೆ ಮದುವೆ ಆದರೆ ಇಬ್ಬರ ಫೋಟೋ ಹಾಗೂ ವೀಡಿಯೋಗಳನ್ನು ವೈರಲ್ ಮಾಡುತ್ತೇನೆ ಎಂದು ಆತ ಬೆದರಿಕೆ ಹಾಕ್ತಿದ್ದ ಎಂಬ ಆರೋಪವಿದೆ. ಸೈರಾಬಾನು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಶರಣಾಗಿದ್ದಾರೆ ಎಂಬ ಶಂಕ ವ್ಯಕ್ತವಾಗಿದೆ.
ಇನ್ನು ಸಾಯಿರಾಬಾನು ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು. ಕುಸ್ತಿ ಸೇರಿ ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಸಾಯಿರಾಬಾನು, ಸಾಕಷ್ಟು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆದರೆ ಇದೀಗ ಮುದ್ದಾಗಿ ಸಾಕಿದ್ದ ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರು ಹಾಕುವಂತಾಗಿದೆ. ನನ್ನ ಮಗಳಿಗೆ ಆದ ಸ್ಥಿತಿ ಯಾರಿಗೂ ಆಗಬಾರದು. ಮೈಲಾರಿ ಎಂಬಾತನಿಗೆ ಗಲ್ಲು ಶಿಕ್ಷೆ ಆಗಬೇಕು ಅಂತ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.